ಗೋಣಿಕೊಪ್ಪ ವರದಿ, ಫೆ. 23 : ಆಕಸ್ಮಿಕ ಬೆಂಕಿಯಿಂದಾಗಿ ಕುಟ್ಟಂದಿ ಗ್ರಾಮದಲ್ಲಿ ಸುಮಾರು 10 ಎಕರೆಗೂ ಹೆಚ್ಚು ಕಾಡು ಬೆಂಕಿಗಾಹುತಿಯಾಗಿದೆ. ಸಕಾಲದಲ್ಲಿ ಅಗ್ನಿಶಾಮಕ ದಳ ಬಾರದ ಕಾರಣ ಸುತ್ತಲಿನ ತೋಟಗಳಿಗೂ ಬೆಂಕಿ ಹೊತ್ತಿಕೊಳ್ಳುವ ಆತಂಕ ಮೂಡಿಸಿದ್ದು, ಸ್ಥಳೀಯರು ಕಾಫಿ ತೋಟಕ್ಕೆ ಹಾಯಿಸುವ ನೀರನ್ನು ಬಿಡುವ ಮೂಲಕ ಬೆಂಕಿ ನಂದಿಸುವ ಕಾರ್ಯ ನಡೆಸಿದರು.
ಕುಟ್ಟಂದಿ ಗ್ರಾಮದ ಕೆ.ಬಿ. ಪ್ರೌಢಶಾಲೆ ಎದುರಿರುವ ಕಾಡು ಸೇರಿರುವ ಖಾಸಗಿ ತೋಟಕ್ಕೆ ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಪರಿಣಾಮ ಸುಮಾರು 10 ಎಕರೆಗಳಷ್ಟು ಕಾಡು ಬೆಂಕಿಗೆ ಆಹುತಿಯಾಯಿತು.
ಕುರುಚಲು ಕಾಡು ಬೆಂಕಿಗೆ ಸಂಪೂರ್ಣವಾಗಿ ಬೆಂದಿರುವದರಿಂದ ಒಣಗಿದ ಮರದ ಮೇಲೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ. ಇದರಿಂದಾಗಿ ಸುತ್ತಲಿನ ತೋಟಗಳಿಗೆ ಹರಡುವ ಆತಂಕ ಮೂಡಿಸಿದೆ. ಸ್ಥಳೀಯ ತೋಟದ ಬೆಳೆಗಾರರು ತೋಟಕ್ಕೆ ಹಾಯಿಸುವ ನೀರನ್ನು ಬಿಡುವ ಮೂಲಕ ಬೆಂಕಿ ನಂದಿಸಲು ಪ್ರಯತ್ನ ನಡೆಸಿದರು. ಸಮೀಪದಲ್ಲಿ ವಿದ್ಯುತ್ ಟ್ರಾನ್ಸ್‍ಫಾರಂ, ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಕೂಡ ಇರುವದರಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಸ್ಥಳೀಯರು ಮಡಿಕೇರಿ ಹಾಗೂ ಗೋಣಿಕೊಪ್ಪ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರೂ ಪ್ರಯೋಜನವಾಗಲಿಲ್ಲ. ಮಡಿಕೇರಿ ಅಗ್ನಿಶಾಮಕ ದಳದ ಸಿಬ್ಬಂದಿ ಗೋಣಿಕೊಪ್ಪ ದಳವನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದರು. ಆದರೆ, ಗೋಣಿಕೊಪ್ಪ ಅಗ್ನಿಶಾಮಕ ದಳ ಪಿರಿಯಾಪಟ್ಟಣದಲ್ಲಿ ಬೇರೊಂದು ಕಾರ್ಯಾಚರಣೆಗೆ ತೆರಳಿರುವ ಕಾರಣ ಕಾರ್ಯಾಚರಣೆ ನಡೆಸಲು ಬಾರಲಿಲ್ಲ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿತ್ತು.
- ಸುದ್ದಿಪುತ್ರ