ಮಡಿಕೇರಿ, ಫೆ. 22: ವ್ಯಕ್ತಿಯೊಬ್ಬರಿಗೆ ಭೂದಾಖಲಾತಿ ಮಾಡಿಸಿ ಕೊಡುವದಾಗಿ ನಂಬಿಸಿ, ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ದುರುಪಯೋಗಪಡಿಸಿಕೊಂಡು ವಂಚಿಸಿದ ಇಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ನವೆಂಬರ್ 3ರಂದು ಈ ಕೃತ್ಯ ನಡೆದಿತ್ತು. ಬೆಂಗಳೂರು ಆನೆಕಲ್ ತಾಲೂಕಿನ ಬ್ಯಾಡರಪೇಟೆಯ ಸಯ್ಯದ್ ಮುಬಾರಕ್ ಹಾಗೂ ಸಯ್ಯದ್ ಖಲೀಲ್ ಬಂಧಿತ ಆರೋಪಿಗಳಾಗಿದ್ದಾರೆ.ಪ್ರಕರಣ ಸಾರಾಂಶ: ಮಡಿಕೇರಿ ನಗರ ಪೊಲೀಸ್ ಠಾಣೆಗೆ ತಾ. 3.11.2018ರಂದು ಬೆಂಗಳೂರು ಬನಶಂಕರಿಯ ಶಿವಲಿಂಗಯ್ಯ (60) ಹಾಜರಾಗಿ ನೀಡಿದ ಪುಕಾರಿನ ಪ್ರಕಾರ ಕುಶಾಲನಗರದ ಕೂಡ್ಲೂರುವಿನಲ್ಲಿ ಸರ್ವೆ ನಂ. 60/2ರಲ್ಲಿ 6 ಎಕರೆ 90 ಸೆಂಟು ಜಾಗವನ್ನು ಹೊಂದಿದ್ದಾರೆ. ಸದರಿ ಜಾಗದ ಕಡತವನ್ನು ಮಾಡಿಸಲು ಪಿರ್ಯಾದಿ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಗೆ ಬಂದಾಗ; ಆರೋಪಿ ಸಯ್ಯದ್ ಮುಬಾರಕ್ ಎಂಬಾತ ದಾಖಲಾತಿ ಮಾಡಿಕೊಡುವದಾಗಿ ನಂಬಿಸಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರಿಗೆ ಕರೆ ಮಾಡುವಂತೆ ನಾಟಕವಾಡಿ ಇನ್ನೊಬ್ಬ ಆರೋಪಿಗೆ ದೂರವಾಣಿ ಕರೆಮಾಡಿ ನಂಬಿಸಿದ್ದಾರೆ. (ಮೊದಲ ಪುಟದಿಂದ) ಅಲ್ಲದೆ, ಸುಮಾರು 1,01 ಲಕ್ಷ ರೂ.ಗಳನ್ನು ಪಡೆದು ಮೋಸಮಾಡಿದ್ದಾಗಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಮೊ.ಸಂ.174/2018 ಕಲಂ:418, 419, 420 ರೆ/ವಿ 34 ಐಪಿಸಿ ರೀತ್ಯ ಪ್ರಕರಣ ದಾಖಲಾಗಿತ್ತು.
ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆಮಾಡುವ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಮಾರ್ಗದರ್ಶನದಲ್ಲಿ, ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಎಸ್. ಸುಂದರ್ರಾಜ್ ಮತ್ತು ಪೊಲೀಸ್ ವೃತ್ತ ನಿರೀಕ್ಷಕ ಪಿ. ಅನೂಪ್ ಮಾದಪ್ಪ ನೇತೃತ್ವದಲ್ಲಿ ನಗರ ಪೊಲೀಸ್ ಠಾಣಾ ಉಪ ನಿರೀಕ್ಷಕ ಷಣ್ಮುಗಂ ಹಾಗೂ ಸಿಬ್ಬಂದಿಗಳಾದ ಕೆ.ಕೆ. ದಿನೇಶ್, ಮಧುಸೂದನ್, ಮನೋಜ್ ಕೆ.ಬಿ. ಮತ್ತು ನಾಗರಾಜ್ ಎಸ್. ಕಡಗಣ್ಣವರ್ ಒಳಗೊಂಡ ತಂಡವನ್ನು ರಚಿಸಲಾಗಿತ್ತು. ಜಿಲ್ಲಾ ಪೊಲೀಸ್ ಸಿ.ಡಿ.ಆರ್. ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿ.ಕೆ. ರಾಜೇಶ್ ಮತ್ತು ಎಂ.ಎ. ಗಿರೀಶ್ ನೀಡಿದ ದೂರವಾಣಿ ಕರೆಯ ಮಾಹಿತಿಯ ಆಧಾರದ ಮೇಲೆ ಈ ಪ್ರಕರಣದಲ್ಲಿನ ಆರೋಪಿಗಳಾದ ಸಯ್ಯದ್ ಮುಬಾರಕ್ ತಂದೆ ಸಯ್ಯದ್ ಫಯಾಜ್ (28) ನೇಯ್ಗೆ ಕೆಲಸ ಹಾಗೂ ಸಯ್ಯದ್ ಖಲೀಲ್ ತಂದೆ ಸಯ್ಯದ್ ರೆಹಮಾನ್ (28) ವೆಲ್ಡಿಂಗ್ ಕೆಲಸ, ಅಲ್ಲದೆ ಆರೋಪಿಗಳಿಬ್ಬರೂ ಬ್ಯಾಡರಪೇಟೆ, ಆನೆಕಲ್ ತಾಲೂಕು, ಬೆಂಗಳೂರು ಗ್ರಾಮಾಂತರ
ಜಿಲ್ಲೆಯವರಾಗಿದ್ದು, ತಲೆಮರೆಸಿಕೊಂಡು ತಮಿಳುನಾಡುವಿನ ನೀಲಗಿರಿ ಜಿಲ್ಲೆಯ ಊಟಿಯಲ್ಲಿ ತಂಗಿದ್ದರು. ಅಲ್ಲಿಂದ ಬಂಧಿಸಿರುವ ಪೊಲೀಸರು ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದರಿ ಆರೋಪಿಗಳ ವಿರುದ್ಧ ಬೆಂಗಳೂರು ಕೆ.ಆರ್. ಪುರಂ, ಕೆಂಗೇರಿ, ಕೋರಮಂಗಲ, ಮಡಿವಾಳ, ಜಯನಗರ, ಜಿಗಣಿ, ಮಾಲೂರು ಪೊಲೀಸ್ ಠಾಣೆಗಳಲ್ಲಿ 10ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ರೀತಿ ಜಾಗದ ದಾಖಲಾತಿಗಳನ್ನು ಮಾಡಿಕೊಡುತ್ತೇವೆಂದು ಯಾರಾದರೂ ಅನಧಿಕೃತ ವ್ಯಕ್ತಿಗಳು ವಂಚಿಸಲು ಪ್ರಯತ್ನಿಸಿದರೆ ಅಂತವರ ಬಗ್ಗೆ ಹತ್ತಿರದ ಪೊಲೀಸ್ ಠಾಣೆ ಅಥವಾ ಕಂಟ್ರೋಲ್ ರೂಂ ನಂ. 08272-228330ಕ್ಕೆ ಮಾಹಿತಿಯನ್ನು ನೀಡಲು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಜನತೆಗೆ ಸಲಹೆ ನೀಡಿದ್ದಾರೆ.