ಮಡಿಕೇರಿ, ಫೆ. 22: ಮರ ಕಡಿಯುವ ಕೆಲಸದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಕೊಂಬೆ ಬಿದ್ದು ಕಾರ್ಮಿಕರೊಬ್ಬರು ದುರ್ಮರಣವನ್ನಪ್ಪಿರುವ ಘಟನೆ ಸಂಭವಿಸಿದೆ.

ಈ ಹಿಂದೆ ಪೊನ್ನತ್‍ಮೊಟ್ಟೆಯಲ್ಲಿ ನೆಲೆಸಿ ಮೂರು ದಿವಸಗಳ ಹಿಂದೆಯಷ್ಟೆ ಸುಂಟಿಕೊಪ್ಪಕ್ಕೆ ಬಂದು ನೆಲೆಯೂರಿದ್ದ ಟಾಪಿಂಗ್ ಅದ್ದು (50) ಎಂಬವರೇ ಈ ರೀತಿ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆ ಎಂದಿನಂತೆ ಅದ್ದು ಅವರು ಸುಂಟಿಕೊಪ್ಪ ಸಮೀಪದ ಸ್ಯಾಂಡಲ್‍ವುಡ್ ತೋಟದಲ್ಲಿ ಸಹ ಕಾರ್ಮಿಕರೊಂದಿಗೆ ಮರ ಕಡಿಯುವ ಕೆಲಸಕ್ಕೆಂದು ತೆರಳಿದ್ದರು. ಮಧ್ಯಾಹ್ನ 12.30 ಸಮಯದಲ್ಲಿ ಸಿಲ್ವರ್ ಮರವನ್ನೇರಿ ಕೊಂಬೆಯನ್ನು ಕಡಿಯುತ್ತಿದ್ದಾಗ ಗಾಳಿ ಜೋರಾಗಿ ಬೀಸಲಾರಂಭಿಸಿದೆ. ಇದರಿಂದ ಮರದ ಕೊಂಬೆ ತುಂಡಾಗಿ ಅದ್ದು ಅವರ ಮೇಲೆಯೇ ಬಿದ್ದಿದೆ. ಕೊಂಬೆ ಅಪ್ಪಳಿಸಿದ ರಭಸಕ್ಕೆ ಮರದಿಂದ ಕೆಳಗೆ ಬಿದ್ದ ಅದ್ದು ತೀವ್ರಗಾಯಗೊಂಡು ಚಿಂತಾಜನಕರಾದರು. ಕೂಡಲೇ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯದಲ್ಲಿ ಪ್ರಾಣಪಕ್ಷಿ ಹಾರಿಹೋಗಿದೆ. ಮೃತ ಅದ್ದು ಈ ಹಿಂದೆ ಮರ ಕಡಿಯುವ ಕೆಲಸವನ್ನು ಮಾಡಿಕೊಂಡು ಪೊನ್ನತ್ ಮೊಟ್ಟೆಯಲ್ಲಿ ವಾಸಿಸುತ್ತಿದ್ದರು. ಕಳೆದ ಮೂರು ದಿವಸಗಳ ಹಿಂದೆಯಷ್ಟೆ ಪೊನ್ನತ್ ಮೊಟ್ಟೆಯಿಂದ ಕುಟುಂಬ ಸಮೇತರಾಗಿ ಸುಂಟಿಕೊಪ್ಪಕ್ಕೆ ಸ್ಥಳಾಂತರಗೊಂಡಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.