ಮಡಿಕೇರಿ, ಫೆ. 23: ಬೆಂಗಳೂರಿನ ಯಲಹಂಕದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಏರ್‍ಶೋನಲ್ಲಿ ಇಂದು ಮಧ್ಯಾಹ್ನದ ಸುಮಾರಿಗೆ ಕಾರುಗಳ ನಿಲುಗಡೆ ಸ್ಥಳದಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡು ನೂರಾರು ಬೆಲೆ ಬಾಳುವ ಕಾರುಗಳು ಸುಟ್ಟು ಹೋಗಿವೆ. ಗಣ್ಯರು ವಿಶೇಷ ಪಾಸ್‍ಗಳನ್ನು ಹೊಂದಿಕೊಂಡು ಒಂದೆಡೆ ಸಾಲುಗಟ್ಟಿ ನಿಲ್ಲಿಸಿದ್ದ ಕಾರುಗಳ ನಡುವೆ ಮಧ್ಯಾಹ್ನ 12.20ರ ಸುಮಾರಿಗೆ ಬೆಂಕಿ ಸಹಿತ ದಟ್ಟ ಕಾರ್ಮೋಡ ಹರಡುತ್ತಾ, ಒಂದರ ಬಳಿಕ ಒಂದರಂತೆ ಕಾರುಗಳು ಹೊತ್ತಿ ಉರಿಯುತ್ತಾ ಸ್ಫೋಟಗೊಳ್ಳತೊಡಗಿವೆ.ಏರ್‍ಶೋ ಸ್ಥಳದಿಂದ 6 ಕಿ.ಮೀ. ದೂರದಲ್ಲಿ ಈ ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದು, ಅಲ್ಲಿಂದ ವಿಶೇಷ ಬಸ್‍ಗಳಲ್ಲಿ ತೆರಳಲು ಕ್ರಮಹಿಸಲಾಗಿತ್ತು. ಈ ದುರಂತದಲ್ಲಿ ಮಕ್ಕಂದೂರು ಹೆಮ್ಮೆತ್ತಾಳು ಮೂಲದ ಐಮುಡಿಯಂಡ ಗಣಪತಿ ಎಂಬವರ ನಿಶಾನ್ ಟೆರಾನೋ (ಕೆ.ಎ.12-ಝೆಡ್-278) ಕಾರು ಸುಟ್ಟು ಹೋಗಿದ್ದು, ಇನೋರ್ವ ಐಚೆಟ್ಟಿರ ಪೊನ್ನಪ್ಪ ಎಂಬವರ ‘ವರ್ನ’ ವಾಹನ ಕೂಡ ಬೆಂಕಿ ಕೆನ್ನಾಲಿಗೆಗೆ ಆಹುತಿಯಾಗಿದೆ.

ಪ್ರತ್ಯಕ್ಷದರ್ಶಿ ಗಣಪತಿ ‘ಶಕ್ತಿ’ಯೊಂದಿಗೆ ದುರ್ಘಟನೆ ಬಗ್ಗೆ ವಿವರಿಸುತ್ತಾ, ಮಧ್ಯಾಹ್ನ 12.10ರ ಸುಮಾರಿಗೆ ವಾಹನ ನಿಲ್ಲಿಸಿ ಸುಮಾರು 70 ಮೀಟರ್ ಕಾಲ್ನಡಿಗೆಯಲ್ಲಿ ಕ್ರಮಿಸುವಷ್ಟರಲ್ಲಿ ಈ ಅನಾಹುತ ಎದುರಾಯಿತು ಎಂದು ತಿಳಿಸಿದ್ದಾರೆ. ಅಲ್ಲದೆ, ಅರೆಕ್ಷಣ ತೀರಾ ಅಪಾಯದೊಂದಿಗೆ ವಾಹನದತ್ತ ಸುಳಿಯಲು ಕೂಡ ಸಾಧ್ಯವಾಗದೆ ಹೋಯಿತು ಎಂದು ಭಯಾನಕ ದೃಶ್ಯವನ್ನು ವಿವರಿಸಿದ್ದಾರೆ.

ಏರ್‍ಶೋ ಮೊದಲ ದಿನವೇ ಎರಡು ಹೆಲಿಕಾಪ್ಟರ್‍ಗಳ ನಡುವಿನ ಡಿಕ್ಕಿಯೊಂದಿಗೆ ಕಹಿ ಘಟನೆ ಮರೆಯುವ ಮುನ್ನ ಇಂದು ಭಾರೀ ಅಗ್ನಿ ದುರಂತದಿಂದ ವಾಹನಗಳ ನಾಶದೊಂದಿಗೆ ಕೋಟಿಗಟ್ಟಲೆ ನಷ್ಟ ಸಂಭವಿಸಿದೆ. ಭಾನುವಾರ ಎಂದಿನಂತೆ ಏರ್‍ಶೋ ಮುಂದುವರಿಯಲಿದೆ ಎಂದು ಯಲಹಂಕ ವಾಯುನೆಲೆ ಅಧಿಕಾರಿ ಗುರುಮೂರ್ತಿ ಖಚಿತಪಡಿಸಿದ್ದಾರೆ.

ಇಂದಿನ ದುರ್ಘಟನೆಯಲ್ಲಿ ಕಾರುಗಳನ್ನು ಕಳೆದುಕೊಂಡವರಿಗೆ ವಿಮಾ ನೆರವು ಹಾಗೂ ಇತರ ಸೌಲಭ್ಯದ ಬಗ್ಗೆ ವಿವಿಧ ಸಂಸ್ಥೆಗಳು ಅಭಯ ನೀಡಿವೆ. ಅಲ್ಲದೆ ಸಾರಿಗೆ ಇಲಾಖೆ ತುರ್ತು ಸಹಾಯವಾಣಿ ಕೇಂದ್ರ ಆರಂಭಿಸಿದೆ.