ಸೋಮವಾರಪೇಟೆ, ಫೆ.21: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾಭ್ಯಾಸವೂ ಸಹ ತೀವ್ರ ಪೈಪೋಟಿಯಲ್ಲಿದ್ದು, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಯಶಸ್ಸು ಪಡೆಯಲು ಸಾಧ್ಯ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಹೇಳಿದರು.

ಇಲ್ಲಿನ ಬಿ.ಟಿ. ಚನ್ನಯ್ಯ ಗೌರಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿದ್ದ ಒಕ್ಕಲಿಗರ ಸಂಘದ ಸಂಚಾಲಕ ಕೆ.ಎನ್. ಜಗದೀಶ್ ಮಾತನಾಡಿ, ಜೀವನದಲ್ಲಿ ಯಾರೂ ಕೂಡಾ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಆತ್ಮವಿಶ್ವಾಸದೊಂದಿಗೆ ಗುರಿ ಸಾಧಿಸುವ ಛಲವನ್ನು ವಿದ್ಯಾರ್ಥಿಗಳು ಹೊಂದಿರಬೇಕು ಎಂದರು.

ಸ್ಪಂದನಾ ಗ್ರಾಮೀಣ ಶಿಕ್ಷಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷ ಹೆಚ್.ಆರ್.ಸುರೇಶ್, ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಪ್ರಾಧ್ಯಾಪಕ ನಾಗರಾಜ್, ಕಾಲೇಜಿನ ಪ್ರಾಂಶುಪಾಲ ಶರಣ್ ಮಾತನಾಡಿದರು.

ಈ ಸಂದರ್ಭ ಕಾಲೇಜು ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಹೆಚ್.ಪಿ. ರಾಜಪ್ಪ, ಶಿವಯ್ಯ, ಕಾರ್ಯದರ್ಶಿ ಎನ್.ಬಿ. ಗಣಪತಿ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.