ಪೊನ್ನಂಪೇಟೆ ತಾಲೂಕು ರಚನೆಗೆ ಸಹಕಾರ ನೀಡಲು ಮನವಿ

ಪೊನ್ನಂಪೇಟೆ, ಫೆ. 21: ಪೊನ್ನಂಪೇಟೆ ನಾಗರಿಕ ವೇದಿಕೆಯ ಹಿರಿಯ ಅದ್ಯಕ್ಷರು ಹಾಗೂ ಹಿರಿಯ ಸದಸ್ಯರುಗಳು ಇಂದು ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡ ಅವರನ್ನು ಬೆಂಗಳೂರು ನಿವಾಸದಲ್ಲಿ ಭೇಟಿ ಮಾಡಿ ತಾವು ಕಳೆದ 10 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಪೊನ್ನಂಪೇಟೆ ತಾಲೂಕು ರಚನೆ ಹಾಗೂ ಘೋಷಣೆಯ ಬಗ್ಗೆ ಸಹಕಾರ ನೀಡಬೇಕೆಂದು ಬೇಡಿಕೆಯ ಮನವಿ ಸಲ್ಲಿಸಿದರು. ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮಿನಿ ಪೊನ್ನಪ್ಪ ಅವರು ಪೊನ್ನಂಪೇಟೆ ಸ್ವತಂತ್ರ ಪೂರ್ವ ಹಾಗೂ ಸ್ವತಂತ್ರ ನಂತರವೂ ಕಿಗ್ಗಟ್ ನಾಡು ತಾಲೂಕು ಆಗಿದ್ದರ ಬಗ್ಗೆ ಮಾಹಿತಿ ನೀಡಿ; ಇದೀಗ ಕೊಡಗು ಕಳೆದ ವರ್ಷದ ಅತಿವೃಷ್ಟಿಯಿಂದ ಜನತೆ ಅಪಾರ ಆಸ್ತಿ- ಪಾಸ್ತಿ ನಷ್ಟ ಅನುಭವಿಸುತ್ತಿದ್ದು, ಸರಕಾರದ ಸೌಲಭ್ಯವನ್ನು ಪಡೆಯಲು ಸೂಕ್ತ ದಾಖಲಾತಿಗಳನ್ನು ಪಡೆಯುವಲ್ಲಿ ಪರಿತಪ್ಪಿಸುತ್ತಿದ್ದಾರೆ ಎಂದು ಗಮನ ಸೆಳೆದರು.

ಇದೇ ಸಂದರ್ಭ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಲೋಕೋಪೋಯೋಗಿ ಇಲಾಖಾ ಮಂತ್ರಿ ರೇವಣ್ಣ ಹಾಗೂ ನೀರಾವರಿ ಮಂತ್ರಿ ಪುಟ್ಟುರಾಜು ಅವÀರೊಂದಿಗೆ ದೇವೇಗೌಡರು ಚರ್ಚಿಸಿದರು. ಈ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳು ತಾವು ಕೆಲವೇ ದಿನಗಳಲ್ಲಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಕೊಡಗಿನ ನೂತನ 2 ತಾಲೂಕುಗಳ ಬಗ್ಗೆ ಸಕಾರಾತ್ಮವಾಗಿ ಸ್ಪಂದಿಸುವ ಆಶಯ ವ್ಯಕ್ತಪಡಿಸಿದರು. ನಾಗರಿಕ ವೇದಿಕೆಯ ಅಧ್ಯಕ್ಷ ಪೊಕ್ಕಳಿಚಂಡ ಪೂಣಚ್ಚ, ಹಿರಿಯ ಸದಸ್ಯರುಗಳಾದ ಚೆಪ್ಪುಡಿರ ಪೊನ್ನಪ್ಪ, ಮೂಕಳೇರ ಕುಶಾಲಪ್ಪ, ಎರ್ಮು ಹಾಜಿ, ಕಾನೂನು ಸಲಹೆಗಾರ ಮತ್ರಂಡ ಅಪ್ಪಚ್ಚು ಇದ್ದರು.