ವೀರಾಜಪೇಟೆ, ಫೆ. 21: ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಗಿಳಿವಿಂಡು ಬಳಗದ 3ನೇ ಸಮಾವೇಶ ತಾ. 24 ರಂದು ನಡೆಯಲಿದೆ ಎಂದು ಗಿಳಿವಿಂಡು ಒಕ್ಕೂಟದ ಅಧ್ಯಕ್ಷ ಹಾಗೂ ವಿಶ್ವವಿದ್ಯಾನಿಲಯದ ಪ್ರೊ. ಬಿ. ಶಿವರಾಮ ಶೆಟ್ಟಿ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಂಗಳೂರು ವಿಶ್ವವಿದ್ಯಾನಿಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಹಳೆಯ ವಿದ್ಯಾರ್ಥಿ, ಅಧ್ಯಾಪಕ ಹಾಗೂ ಸಿಬ್ಬಂದಿಗಳ ಒಕ್ಕೂಟವಾದ ಗಿಳಿವಿಂಡು ಸಮಾವೇಶ ತಾ. 24 ರಂದು ಕೊಣಾಜೆಯಲ್ಲಿನ ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ದೆಹಲಿಯ ಜೆಎನ್ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ‘ಉನ್ನತ ಶಿಕ್ಷಣದಲ್ಲಿ ಕನ್ನಡ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾನಿಲಯದ ಪ್ರಬಾರ ಕುಲಪತಿ ಪಿ. ಈಶ್ವರ, ಜಾನಪದ ವಿದ್ವಾಂಸರಾದ ಪ್ರೊ. ಬಿ.ಎ. ವಿವೇಕ ರೈ ಹಾಗೂ ಕುಲಸಚಿವ ಎ.ಎಂ. ಖಾನ್, ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ನಾಗಪ್ಪ ಗೌಡ ಸೇರಿದಂತೆ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರು ಭಾಗವಹಿಸಲಿದ್ದಾರೆ. ಬೆಳಿಗ್ಗೆ 9 ರಿಂದ ನೋಂದಣಿ, 10.30 ರಿಂದ ಒಕ್ಕೂಟದ ಮಹಾಸಭೆ, 11.30 ರಿಂದ ಸಭಾ ಕಾರ್ಯಕ್ರಮ ನಡೆದು ಅಪರಾಹ್ನ 2 ರಿಂದ 4 ರವರೆಗೆ ಗಿಳಿವಿಂಡು ತಂಡಗಳ ದಾಖಲೀಕರಣ ನಡೆಯಲಿದೆ. ಸಮಾವೇಶದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9449766505 ಅನ್ನು ಸಂಪರ್ಕಿಸುವಂತೆ ಅವರು ಕೋರಿದ್ದಾರೆ.