ಸೋಮವಾರಪೇಟೆ, ಫೆ. 21: ಬಿಲ್ ಪಾವತಿಸದ ನೆಪದಲ್ಲಿ ಕಾಫಿ ಬೆಳೆಗಾರರ ಕೃಷಿ ನೀರಾವರಿಯ ಪಂಪ್‍ಸೆಟ್‍ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ, ಬೆಳೆಗಾರರಿಗೆ ಹಾಗೂ ರೈತರಿಗೆ ಸೆಸ್ಕ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ತಾಲೂಕು ಕಾಫಿ ಬೆಳೆಗಾರರ ಸಂಘ ಆರೋಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಕಳೆದ ಮಳೆಗಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಧಾರಾಕಾರ ಮಳೆ ಸುರಿದು ಶೇ.80ರಷ್ಟು ಫಸಲು ನಷ್ಟವಾಗಿದ್ದು, ಕಾಫಿ ತೋಟಗಳು ರೋಗಪೀಡಿತವಾಗಿವೆ. ಈಗ ನೀರು ಕೊಟ್ಟು ಕಾಫಿ ಹೂ ಅರಳಿಸುವ ಸಂದರ್ಭದಲ್ಲಿ ಪಂಪ್‍ಸೆಟ್‍ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಕಡಿತಗೊಳಿಸಿರುವ ವಿದ್ಯುತ್‍ನ್ನು ಮುಂದಿನ ಎರಡು ದಿನಗಳಲ್ಲಿ ಮರು ಸಂಪರ್ಕ ನೀಡಬೇಕು ತಪ್ಪಿದಲ್ಲಿ ತಾ. 25ರಂದು ಪಟ್ಟಣದ ಸೆಸ್ಕ್ ಕಚೇರಿ ಎದುರು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.

ಅಕಾಲಿಕ ಮಳೆಯಿಂದ ಕಳೆದ ಒಂದು ದಶಕಗಳಿಂದ ಕಾಫಿ ಬೆಳೆಗಾರರು ಫಸಲು ನಷ್ಟ ಅನುಭವಿಸುತ್ತಿದ್ದಾರೆ. 10 ಎಕರೆವರೆಗಿನ ಆಸ್ತಿಯಿರುವ ಕಾಫಿ ಬೆಳೆಗಾರರಿಗೆ ಸರ್ಕಾರ ಉಚಿತ ವಿದ್ಯುತ್ ನೀಡಬೇಕು. 10 ಎಕರೆಗಿಂತ ಹೆಚ್ಚಿರುವ ಬೆಳೆಗಾರರಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಕಲ್ಪಿಸಬೇಕು ಎಂದು ಒತ್ತಾಯಿಸಿದರು. 10 ಎಚ್.ಪಿ. ಒಳಗಿನ ಪಂಪ್‍ಶೆಟ್‍ಗಳ ವಿದ್ಯುತ್ ಬಿಲ್‍ನ್ನು ಸರ್ಕಾರ ಮನ್ನಾ ಮಾಡಬೇಕು ಎಂದು ಈ ಸಂದರ್ಭ ಆಗ್ರಹಿಸಿದರು.

ರೈತರೇ ದೇಶದ ನಿಜವಾದ ಸಂಪತ್ತು, ಅವರುಗಳನ್ನು ರಕ್ಷಿಸುವ ಹೊಣೆ ಸರ್ಕಾರದ್ದು ಎಂದು ಗೋಷ್ಠಿಯಲ್ಲಿದ್ದ ಕಾಫಿ ಬೆಳೆಗಾರ ಎಂ.ಟಿ. ವಿಜೇಂದ್ರ ಮನವಿ ಮಾಡಿದರು.

ಭತ್ತದ ಗದ್ದೆಗಳ ಪಕ್ಕದಲ್ಲೇ ಕಾಫಿ ತೋಟಗಳಿವೆ. ಗದ್ದೆಯಲ್ಲಿ ಕೊಳವೆ ಬಾವಿಗಳ ನಿರ್ಮಾಣ ಅಸಾಧ್ಯ. ಕಾಫಿ ತೋಟದಲ್ಲಿ ಕೊರೆಸಿದ ಬೋರ್‍ವೆಲ್‍ಗಳಿಂದ ಭತ್ತ, ರಾಗಿ, ತರಕಾರಿ ಬೆಳೆಯಲು ನೀರನ್ನು ಉಪಯೋಗಿಸಲಾಗುತ್ತಿದೆ. ಈ ಕಾರಣದಿಂದ ಅಧಿಕಾರಿಗಳು ತಾರಾತಮ್ಯ ಮಾಡಬಾರದು ಎಂದು ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ. ಭರತ್ ಕುಮಾರ್ ಹೇಳಿದರು. ಗೋಷ್ಠಿಯಲ್ಲಿ ಲಿಂಗೇರಿ ರಾಜೇಶ್, ಕೆ.ಎಂ.ಲಕ್ಷ್ಮಣ ಉಪಸ್ಥಿತರಿದ್ದರು.