ಮಡಿಕೇರಿ, ಫೆ. 21 : ವಿಕಲಚೇತನರ ರಿಯಾಯಿತಿ ದರದ ಬಸ್‍ಪಾಸ್‍ನ್ನು 2019ನೇ ಸಾಲಿಗೆ ನವೀಕರಿಸಿಕೊಳ್ಳದೇ ಇರುವ 3 ತಾಲೂಕಿನ ವಿಕಲಚೇತನರಿಗೆ ತಾ. 22 ರಂದು (ಇಂದು) ನಗರದ ಕೆ.ಎಸ್.ಆರ್.ಟಿ. ಬಸ್ ನಿಲ್ದಾಣದಲ್ಲಿ 2ನೇ ಬಾರಿ ಅವಕಾಶವನ್ನು ಕಲ್ಪಿಸಿದ್ದು ನವೀಕರಿಸದೇ ಇರುವ ವಿಕಲಚೇತನರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿಕಲಚೇತನ ಅಧಿಕಾರಿ ಕೋರಿದ್ದಾರೆ.

ಪಾಸು ನವೀಕರಣಕ್ಕೆ ಸಂಬಂಧಿಸಿದಂತೆ ಹಳೆಯ ಪಾಸನ್ನು ಕಡ್ಡಾಯವಾಗಿ ಹಿಂತಿರುಗಿಸುವದು ಹಾಗೂ ಅಂಗವಿಕಲರ ಕಲ್ಯಾಣಾಧಿಕಾರಿಯವರಿಂದ ದೃಢೀಕರಣ ಪಡೆದ ಗುರುತಿನ ಚೀಟಿ ಪುಸ್ತಕದ ಯಥಾಪ್ರತಿ, ಪಾಸ್‍ಪೋರ್ಟ್ ಅಳತೆಯ 2 ಪೋಟೋ, ಸ್ಟಾಂಪ್ ಸೈಜಿನ 1 ಫೋಟೋ, ಆಧಾರ್ ಕಾರ್ಡ್‍ನ ಪ್ರತಿ ಹಾಗೂ ರೂ. 660ನ್ನು ನಗದಾಗಿ ಪಾವತಿಸಿ ಪಾಸುಗಳನ್ನು ಪಡೆದುಕೊಳ್ಳಬಹುದಾಗಿದೆ. ನವೀಕರಣ ಸಮಯದಲ್ಲಿ ವಿಕಲಚೇತನರ ಗುರುತಿನ ಚೀಟಿಯ ಮೂಲ ಪ್ರತಿಯನ್ನು ಪರಿಶೀಲನೆಗೆ ಒದಗಿಸಬೇಕಿದೆ. ಹೊಸದಾಗಿ ಪಾಸು ಪಡೆಯುವವರು ವಿಭಾಗೀಯ ಕಚೇರಿ ಕರಾರಸಾ ನಿಗಮ ಮುಕ್ರಂಪಾಡಿ, ಪುತ್ತೂರು ಇಲ್ಲಿಗೆ ಅರ್ಜಿಯನ್ನು ಸಲ್ಲಿಸಿ ಪಾಸು ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಡಿಕೇರಿ, ಕೊಡಗು ಜಿಲ್ಲೆಯ ವಿಕಲಚೇತನರ ಸಹಾಯವಾಣಿ ಸಂಖ್ಯೆ 08272-222830ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ದೇವರಾಜು ತಿಳಿಸಿದ್ದಾರೆ.