ಸೋಮವಾರಪೇಟೆ, ಫೆ. 20: ಕಾಶ್ಮೀರದ ಪುಲ್ವಾಮದಲ್ಲಿ ಫೆ. 14ರಂದು ನಡೆದ ಭಯೋತ್ಪಾದಕ ಧಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಫೆ. 15ರಂದು ಪಟ್ಟಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ್ದು, ಅದೇ ದಿನ ಸಂಜೆ ಯುವಕನೋರ್ವ ತನ್ನ ಮನೆಯಲ್ಲಿ ಪಟಾಕಿ ಸಿಡಿಸಿ ಸೈನಿಕರ ಸಾವನ್ನು ಸಂಭ್ರಮಿಸಿದ್ದಾನೆ. ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣಾ ವೇದಿಕೆಯ ತಾಲೂಕು ಅಧ್ಯಕ್ಷ ಎಂ.ಬಿ. ಉಮೇಶ್ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪಟ್ಟಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ ದಿನವೇ, ರಾತ್ರಿ ಪಟ್ಟಣದ ರೇಂಜರ್ ಬ್ಲಾಕ್ ನಿವಾಸಿ ಶಂಷುದ್ದೀನ್ ಎಂಬಾತ ತನ್ನ ಮನೆಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಪಟಾಕಿ ಸಿಡಿಸಿ ಸೈನಿಕರ ಸಾವನ್ನು ಸಂಭ್ರಮಿಸಿದ್ದು, ಭಯೋತ್ಪಾದಕರ ಕೃತ್ಯವನ್ನು ಬೆಂಬಲಿಸುವ ರೀತಿಯಲ್ಲಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೇಶವೇ ಶೋಕದಲ್ಲಿದ್ದರೂ ಈತ ಪಟಾಕಿ ಸಿಡಿಸುವ ಮೂಲಕ ಭಯೋತ್ಪಾದಕ ಕೃತ್ಯವನ್ನು ಸಂಭ್ರಮಿಸಿರುವದು ಅಕ್ಷಮ್ಯ. ಈತನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಠಾಣೆಯ ಎದುರು ಜಮಾವಣೆಗೊಂಡು ಒತ್ತಾಯಿಸಿದರು. ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳದಿದ್ದರೆ, ಠಾಣೆಯ ಎದುರೇ ಪ್ರತಿಭಟನೆ ಮಾಡುವದರೊಂದಿಗೆ ನಾಳೆ ಸೋಮವಾರಪೇಟೆ ಪಟ್ಟಣ ಬಂದ್‍ಗೆ ಕರೆ ಕೊಡುವದಾಗಿ ಎಚ್ಚರಿಸಿದರು.

ನಂತರ ಠಾಣೆಗೆ ಆಗಮಿಸಿದ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಅವರುಗಳು ಮೇಲಧಿಕಾರಿಗಳಿಗೆ ಪ್ರಕರಣ ಬಗ್ಗೆ ಮಾಹಿತಿ ನೀಡಿದ ನಂತರ ದೂರು ಸ್ವೀಕರಿಸಲಾಯಿತು.

ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರುಗಳಾದ ಸುಭಾಷ್ ತಿಮ್ಮಯ್ಯ, ದರ್ಶನ್ ಜೋಯಪ್ಪ, ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಾದ ಬಿ.ಜೆ. ದೀಪಕ್, ದರ್ಶನ್, ಮಹೇಶ್, ಕಿಬ್ಬೆಟ್ಟ ಮಧು, ಮಸಗೋಡು ಸತೀಶ್, ಮನುಕುಮಾರ್, ಪದ್ಮನಾಭ್, ಉದಯ, ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.