ಗೋಣಿಕೊಪ್ಪಲು, ಫೆ. 20: ಹೊರ ರಾಜ್ಯದ ಕಾರ್ಮಿಕರಿಂದ ಹತ್ಯೆಯಾದ ದಲಿತ ವಿದ್ಯಾರ್ಥಿನಿ ಸಂಧ್ಯಾಳ ಮನೆಗೆ ಭೇಟಿ ನೀಡಿದ ಜೆಡಿಎಸ್ನ ಮುಖಂಡರು ಕುಟುಂಬಕ್ಕೆ ಸಾಂತ್ವನ ಹೇಳಿದರು. ಕೊಡಗು ಜಿಲ್ಲಾ ಜೆಡಿಎಸ್ನ ಪ್ರಚಾರ ಸಮಿತಿಯ ಅಧ್ಯಕ್ಷ ಕೆ.ಎಂ.ಬಿ. ಗಣೇಶ್ ಹಾಗೂ ಇತರ ಮುಖಂಡರು ಸಿದ್ದಾಪುರ ತೋಟದ ಲೈನ್ ಮನೆಯಲ್ಲಿ ವಾಸವಿರುವ ಸಂಧ್ಯಾಳ ಮನೆಗೆ ಭೇಟಿ ನೀಡಿ ವೈಯುಕ್ತಿಕ ಪರಿಹಾರವನ್ನು ವಿತರಿಸಿದರು.
ಈ ಸಂದರ್ಭ ಸಂಧ್ಯಾಳ ಪೋಷಕರು ಕಳೆದ ಒಂದು ವರ್ಷದಿಂದ ಪಡಿತರ ಚೀಟಿಗೆ ಅಧಿಕಾರಿಗಳ ಮುಂದೆ ಅಲೆದಾಡು ತ್ತಿರುವ ಬಗ್ಗೆ ತಮ್ಮ ನೋವನ್ನು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಪ್ರಮುಖರು ಕುಟುಂಬಕ್ಕೆ ಸಿಗಬೇಕಾದ ಪಡಿತರ ಚೀಟಿಯ ಬಗ್ಗೆ ಮಾತುಕತೆ ನಡೆಸಿದರು. ಈ ಸಂದರ್ಭ ಉಪ ನಿರ್ದೇಶಕರು ಎರಡು ದಿನದ ಒಳಗೆ ಪಡಿತರ ಚೀಟಿಯನ್ನು ಅಂಚೆಯ ಮೂಲಕ ಸಂಧ್ಯಾಳ ಮನೆಯ ವಿಳಾಸಕ್ಕೆ ಕಳುಹಿಸಿ ಕೊಡುವ ಭರವಸೆ ನೀಡಿದರು.
ಪ್ರಕರಣವನ್ನು ಕೊಡಗು ಜಿಲ್ಲಾ ಉಸ್ತುವಾರಿ ಮಂತ್ರಿಯ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವದು ಆ ಮೂಲಕ ಸರ್ಕಾರದಿಂದ ನೊಂದ ಕುಟುಂಬಕ್ಕೆ ಪರಿಹಾರ ದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದೆಂದು ಕೆ.ಎಂ. ಗಣೇಶ್ ಭರವಸೆ ನೀಡಿದರು. ಹೊರ ರಾಜ್ಯದಿಂದ ಕೂಲಿ ನೆಪದಲ್ಲಿ ಆಗಮಿಸಿ ಕೆಲವು ಮಂದಿ ಇಂತಹ ಅಹಿತಕರ ಘಟನೆ ನಡೆಸುತ್ತಿರುವ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿದ ಅವರು ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ಆಗ್ರಹಿಸಿದರು.
ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜೆಡಿಎಸ್ ಮುಖಂಡ ಬೆನ್ನಿ ಬರೋಸ್, ಮಡಿಕೇರಿ ಹಿಂದುಳಿದ ವರ್ಗದ ಕ್ಷೇತ್ರ ಅಧ್ಯಕ್ಷ ಎನ್.ಸಿ. ಸುನಿಲ್ ವೀರಾಜಪೇಟೆ ನಗರ ಜೆಡಿಎಸ್ ಅಧ್ಯಕ್ಷ ಪಿ.ಎ. ಮಂಜುನಾಥ್, ಯೋಗೇಶ್ ನಾಯ್ಡು ಹಾಗೂ ಅಬ್ದುಲ್ಲ, ಉಪಸ್ಥಿತರಿದ್ದರು.
-ಹೆಚ್.ಕೆ.ಜಗದೀಶ್