ಮಡಿಕೇರಿ, ಫೆ. 20: ಪಾಪ್ಯುಲರ್ ಫ್ರಂಟ್ ದಿನಾಚರಣೆಯ ಅಂಗವಾಗಿ ಪಾಪ್ಯುಲರ್ ಫ್ರಂಟ್ನ ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ಜಿಲ್ಲಾಧ್ಯಕ್ಷ ಟಿ.ಎ. ಹಾರಿಸ್ ಅವರು ಧ್ವಜಾ ರೋಹಣವನ್ನು ನಡೆಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪಾಪ್ಯುಲರ್ ಫ್ರಂಟ್ ಇಂಡಿಯಾ ದೇಶದಲ್ಲಿ ಸಕರಾತ್ಮಕ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆ ಯನ್ನು ತರುವ ನಿಟ್ಟಿನಲ್ಲಿ ಜನರಿಗಾಗಿ ಮತ್ತು ಜನರಿಂದ ನಡೆಸಲ್ಪಡುವ ನವ ಸಾಮಾಜಿಕ ಆಂದೋಲನವು, ಸಮಾಜ ಮತ್ತು ದೇಶ ಎದುರಿಸುತ್ತಿರುವ ಸಮಕಾಲೀನ ಸವಾಲುಗಳನ್ನು ಎದುರಿಸುತ್ತಾ ಮುಂದುವರಿಯುತ್ತಿದೆ.
ಕೇರಳದಿಂದ ಹೊರಟ ಈ ಪಯಣ ತಮಿಳುನಾಡಿನ ಮೂಲಕ ಸಾಗಿ ಕರುನಾಡನ್ನು ಪ್ರವೇಶಿಸಿತು. ಮುಂದಿನ ದಿನಗಳಲ್ಲಿ ಈ ಆಂದೋಲನ ದೇಶದ ವಿವಿಧ ಭಾಗಗಳಲ್ಲಿ ಮುಂದುವರೆಯಿತು. ಇಂದು ದೇಶದಲ್ಲಿ ದುರ್ಬಲ ವರ್ಗದವರಿಗೆ ಕಾನೂನಾತ್ಮಕ ಹೋರಾಟ, ಪ್ರತಿಭಟನಾತ್ಮಕ ಹೋರಾಟ ನಡೆಸುವದರ ಮೂಲಕ ಹಕ್ಕುಗಳನ್ನು ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಹಾಗೂ ಶೈಕ್ಷಣಿಕ ಸಬಲೀಕರಣವನ್ನು ನಡೆಸುತ್ತಿದೆ ಎಂದು ಅವರು ತಿಳಿಸಿದರು.
ಈ ವರ್ಷ ಪಾಪ್ಯುಲರ್ ಫ್ರಂಟ್ ಇಂಡಿಯಾ ಪಾಪ್ಯುಲರ್ ಫ್ರಂಟ್ ಸಂಸ್ಥಾಪನಾ ದಿನಾಚರಣೆಯ 2019ರ ವಿಷಯವಾಗಿ ದ್ವೇಷ ರಾಜಕೀಯ ಸೋಲಿಸಿ ಎಂಬ ರಾಜಕೀಯ ಸಂದೇಶವನ್ನು ಅಳವಡಿಸಿಕೊಂಡಿದೆ. ಎಲ್ಲಾ ಜಾತ್ಯತೀತ ಪಕ್ಷಗಳು ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಬೇಕಾಗಿದೆ ಎಂದು ಕರೆ ನೀಡಿದರು.
ಸಭೆಯನ್ನುದ್ದೇಶಿಸಿ ಎಸ್.ಡಿ.ಪಿ.ಐ. ಯ ಜಿಲ್ಲಾಧ್ಯಕ್ಷ ಟಿ.ಹೆಚ್. ಅಬೂಬಕ್ಕರ್ ಹಾಗೂ ರಾಜ್ಯ ಸಮಿತಿಯ ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ ದರು. ನಂತರ ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸಲಾಯಿತು.
ಪಾಪ್ಯುಲರ್ ಫ್ರಂಟ್ನ ಧ್ವಜಾರೋಹಣಕ್ಕೂ ಮೊದಲು ಕಾಶ್ಮೀರದ ಪುಲ್ವಾರದಲ್ಲಿ 50 ಮಂದಿ ಧೀರ ಯೋಧರ ಸಾವಿಗೆ ಕಾರಣರಾದ ಉಗ್ರರ ಕೃತ್ಯವನ್ನು ಖಂಡಿಸಲಾಯಿತು. ಕೊಡಗಿನ ಸೋಮವಾರಪೇಟೆ, ಕುಶಾಲನಗರ, ನಾಪೋಕ್ಲು ಹಾಗೂ ಸಿದ್ದಾಪುರದಲ್ಲಿ ಧ್ವಜಾರೋಹಣವನ್ನು ನಡೆಸಿ ಸಿಹಿ ವಿತರಣೆ ನಡೆಸಲಾಯಿತು.