ಸೋಮವಾರಪೇಟೆ, ಫೆ. 20: ಸಮೀಪದ ತೋಳೂರುಶೆಟ್ಟಳ್ಳಿಯ ಸೂರ್ಯೋದಯ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಕುಶಾಲನಗರದ ಜೆಬಿಎಸ್‍ಸಿ ತಂಡ ಪ್ರಥಮ ಸ್ಥಾನ ಪಡೆದಿದ್ದು, ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಚನ್ನರಾಯಪಟ್ಟಣದ ಆಟಗಾರರನ್ನು ಒಳಗೊಂಡಿದ್ದ ಚಾವಡಿಮನೆ ತೋಳೂರುಶೆಟ್ಟಳ್ಳಿ ತಂಡ ದ್ವಿತೀಯ ಸ್ಥಾನಕ್ಕೆ ಭಾಜನವಾದರೆ, ಎಂ.ಡಬ್ಲ್ಯೂ.ಎ. ತಂಡ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 4ನೇ ಬಹುಮಾನವನ್ನು ಬಜೆಗುಂಡಿಯ ಅಣ್ಣಪ್ಪ ಫ್ರೆಂಡ್ಸ್ ತಂಡ ಪಡೆಯಿತು.
ಇದರೊಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳೆಯರಿಗೆ ಆಯೋಜಿಸಲಾಗಿದ್ದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಭತ್ತದರಾಶಿ-ಸಿಂಗನಹಳ್ಳಿ ತಂಡ ಪ್ರಥಮ, ತೋಳೂರುಶೆಟ್ಟಳ್ಳಿ ತಂಡ ದ್ವಿತೀಯ ಸ್ಥಾನ ಪಡೆದವು.
ಉದ್ಯಮಿ ಹರಪಳ್ಳಿ ರವೀಂದ್ರ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ವಿ.ಜೆ. ಭಾರತಿ ಉಮೇಶ್, ಸೂರ್ಯೋದಯ ಸಂಘದ ಅಧ್ಯಕ್ಷ ಟಿ.ಜೆ. ರಂಜನ್, ಯುವ ಒಕ್ಕೂಟದ ಅಧ್ಯಕ್ಷೆ ಕೆ.ಆರ್. ಚಂದ್ರಿಕಾ, ಉದ್ಯಮಿಗಳಾದ ಗಿರೀಶ್ ಮಲ್ಲಪ್ಪ, ಪ್ರಮುಖರಾದ ಎಂ.ಡಿ. ಹರೀಶ್, ಸಿ.ಕೆ. ಶಿವಕುಮಾರ್, ಡಿ.ಎನ್. ರಾಜಗೋಪಾಲ್, ಬಿ.ಬಿ. ಆದರ್ಶ್, ಬಿ.ಈ. ಶಿವಯ್ಯ ಅವರುಗಳು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಚೌಡ್ಲು ವಿಎಸ್‍ಎಸ್‍ಎನ್ ಅಧ್ಯಕ್ಷ ಕೆ.ಟಿ. ಪರಮೇಶ್ ವಹಿಸಿದ್ದರು. ಈ ಸಂದರ್ಭ ಮುತ್ತಪ್ಪ ದೇವಾಲಯದ ಜಯಣ್ಣ, ನಿವೃತ್ತ ಸಿಆರ್‍ಪಿಎಫ್ ಯೋಧರಾದ ಕೆ.ಸಿ. ದೇವಕ್ಕಿ, ಕಬಡ್ಡಿ ಆಟಗಾರ ರತನ್, ಅಥ್ಲೀಟ್ ರಾಶಿ ಅವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.