ಮಡಿಕೇರಿ, ಫೆ. 20: ದೇಶದಲ್ಲಿ ಕ್ರೀಡಾರಂಗದಲ್ಲಿ ಬಹುತೇಕ ಎಲ್ಲಾ ಕ್ರೀಡೆಗಳಲ್ಲಿ ಸಾಧನೆ ತೋರುವ ಮೂಲಕ ಕ್ರೀಡಾಜಿಲ್ಲೆ ಎಂದು ಖ್ಯಾತಿ ಪಡೆದಿರುವ ಕೊಡಗಿನ ಕ್ರೀಡಾ ಇತಿಹಾಸಕ್ಕೆ ಇದೀಗ ಮತ್ತೊಂದು ಗರಿ ಮೂಡಿದಂತಾಗಿದೆ. ಸಾಹಸಮಯ ವಾದ ಪ್ರಸ್ತುತ ಕ್ರೀಡಾರಂಗದಲ್ಲಿ ಗಮನ ಸೆಳೆಯುತ್ತಿರುವ ಫೆನ್ಸಿಂಗ್ (ಕತ್ತಿವರಸೆ) ಕ್ರೀಡೆಯಲ್ಲಿ ಜಿಲ್ಲೆ ಅಥವಾ ಕರ್ನಾಟಕದಿಂದ ಈತನಕ ಹೆಚ್ಚು ಸಾಧನೆ ಕಂಡುಬಂದಿಲ್ಲ. ಇದೀಗ ಮಡಿಕೇರಿಯ ಯುವ ವಿದ್ಯಾರ್ಥಿ ನಗರದ ಸಂತ ಮೈಕಲ್ ವಿದ್ಯಾಸಂಸ್ಥೆಯ ಪಿ.ಯು.ಸಿ. ವಿದ್ಯಾರ್ಥಿ ಕಡಗದಾಳುವಿನ ಕೆಚ್ಚೆಟ್ಟೀರ ಡಿ. ವಿಜಯ್ ಉತ್ತಯ್ಯ ಈ ಸಾಧನೆ ತೋರಿದ್ದಾನೆ.ರಾಜ್ಯಮಟ್ಟ ಹಾಗೂ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಸಾಧನೆ ತೋರಿರುವ ವಿಜಯ್ ಉತ್ತಯ್ಯ ಇದೀಗ ಏಷ್ಯನ್ ಜೂನಿಯರ್ ಅಂಡ್ ಕೆಡೆಟ್ ಫೆನ್ಸಿಂಗ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿದ್ದು, ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ದೇಶದ ಹಲವೆಡೆ ನಡೆದ ಫೆನ್ಸಿಂಗ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಉತ್ತಮ ಸಾಧನೆಯೊಂದಿಗೆ ಪ್ರಶಸ್ತಿಯನ್ನು ಗಳಿಸಿರುವ ವಿಜಯ್ 2018ರಲ್ಲಿ ಕಟಕ್‍ನಲ್ಲಿ ಜರುಗಿದ ಪಂದ್ಯಾವಳಿಯಲ್ಲಿ ರ್ಯಾಂಕಿಂಗ್‍ನಲ್ಲೂ ಸ್ಥಾನ ಪಡೆದಿದ್ದಾನೆ. ಈ ಸಾಧನೆಯ ಮೂಲಕ ಇದೀಗ 2019ರ ಫೆಬ್ರವರಿ 27ರಿಂದ ಮಾರ್ಚ್ 8ರವರೆಗೆ ಜೋರ್ಡಾನ್ ದೇಶದಲ್ಲಿ ನಡೆಯಲಿರುವ ಏಷ್ಯನ್ ಜೂನಿಯರ್ ಅಂಡ್ ಕೆಡೆಟ್ ಫೆನ್ಸಿಂಗ್ ಚಾಂಪಿಯನ್ ಶಿಪ್‍ಗೆ ಆಯ್ಕೆಯಾಗಿದ್ದಾನೆ. ಜೋರ್ಡಾನ್ ಫೆನ್ಸಿಂಗ್ ಫೆಡರೇಷನ್ ಮೂಲಕ ಈ ಪಂದ್ಯಾವಳಿ ಆಯೋಜನೆಗೊಂಡಿದೆ. ಅಂತರ್ರಾಷ್ಟ್ರೀಯ ಮಾನ್ಯತೆಯನ್ನು ಹೊಂದಿರುವ ಈ ಕ್ರೀಡೆಗೆ ಬಳಸುವ ಕತ್ತಿ (ಸ್ವಾರ್ಡ್) ದುಬಾರಿಯಾಗಿದ್ದು, ಸದ್ಯದ ಮಟ್ಟಿಗೆ ಖರ್ಚು ವೆಚ್ಚವನ್ನು ಪೋಷಕರೇ ನಿಭಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಷಕರು ಇದೀಗ ಪ್ರಾಯೋಜಕತ್ವವನ್ನು ನಿರೀಕ್ಷಿಸುತ್ತಿದ್ದಾರೆ.
ವಿಜಯ್ ಉತ್ತಯ್ಯ ಮಾಸ್ಟರ್ಸ್ ಕ್ರೀಡೆಯಲ್ಲಿ ಸಾಧನೆ ತೋರಿರುವ ಕ್ರೀಡಾಪಟು ಕೆಚ್ಚೆಟ್ಟೀರ ರೇಷ್ಮಾ
ಹಾಗೂ ಈ ಹಿಂದೆ ಬಾಸ್ಕೆಟ್‍ಬಾಲ್ ಆಟದಲ್ಲಿ ಗುರುತಿಸಿಕೊಂಡಿದ್ದ ಕಡಗದಾಳುವಿನ ಕೆಚ್ಚೆಟ್ಟೀರ ದೇವಯ್ಯ ಅವರ ಪುತ್ರ. -ಶಶಿ.