ಮಡಿಕೇರಿ, ಫೆ.19 : ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರಿಂದ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ವಿದ್ಯಾರ್ಥಿನಿ ಕುಟುಂಬಕ್ಕೆ ಒಂದು ವಾರದೊಳಗೆ ನ್ಯಾಯ ದೊರಕಿಸಿಕೊಡದಿದ್ದಲ್ಲಿ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳ, ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವದು ಎಂದು ‘ಜಸ್ಟಿಸ್ ಫಾರ್ ಸಂಧ್ಯಾ’ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಮಿತಿಯ ಪ್ರಮುಖರು, ನಂತರ ಸುದ್ದಿಗೋಷ್ಠಿ ನಡೆಸಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ವಿದ್ಯಾರ್ಥಿನಿ ಕೊಲೆಯಾಗಿ ಎರಡು ವಾರಗಳೇ ಕಳೆದಿದ್ದರೂ, ಸರಕಾರ, ಜಿಲ್ಲಾಡಳಿತ, ತಾಲೂಕು ಆಡಳಿತದ ಯಾವದೇ ಪ್ರತಿನಿಧಿಗಳು ಆಕೆಯ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳುವ ಸೌಜನ್ಯವನ್ನೂ ತೋರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳು, ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರ ನ್ನೊಳಗೊಂಡ ಹೋರಾಟ ಸಮಿತಿಯನ್ನು ರಚಿಸಲಾಗಿದ್ದು, ಆ ಮೂಲಕ ಸರಕಾರದ ಗಮನ ಸೆಳೆಯುವ ಕಾರ್ಯ ನಡೆಯಲಿದೆ ಎಂದರು.

ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಸರಕಾರ ರೂ. 25 ಲಕ್ಷಗಳ ಪರಿಹಾರ ನೀಡಬೇಕು. ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ಒದಗಿಸಬೇಕು, ಕಡು ಬಡತನದಲ್ಲಿರುವ ಕುಟುಂಬಕ್ಕೆ ನಿವೇಶನ ನೀಡಬೇಕು, ಕೊಡಗು ಜಿಲ್ಲೆಯಲ್ಲಿ ವಾಸವಾಗಿರುವ ಹೊರ ರಾಜ್ಯದ ಕಾರ್ಮಿಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗಳನ್ನು ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸÀಬೇಕು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಹೆಚ್.ಆರ್.ಶಿವಪ್ಪ, ಪ್ರಮುಖರಾದ ಜನಾರ್ಧನ, ಎ.ಎಸ್.ಮುಸ್ತಾಫ, ರೆಜಿತ್‍ಕುಮಾರ್ ಗುಯ್ಯ, ಸಿ.ಎಂ.ಗಿರೀಶ್ ಹಾಗೂ ಮೃತಳ ಸಹೋದರ ದಿಲೀಪ್ ಉಪಸ್ಥಿತರಿದ್ದರು.