ಮಡಿಕೇರಿ, ಫೆ. 17: ಭಾರತೀಯ ಧೀರ ಯೋಧರ ಮೇಲೆ ಉಗ್ರಗಾಮಿಗಳು ನಡೆಸಿದ ಧಾಳಿಗೆ ಕೈಗೊಳ್ಳಬೇಕಾದ ಪ್ರತೀಕಾರ ಕ್ರಮಗಳ ಬಗ್ಗೆ ಸೇನಾ ಪರಣಿತರ ಸಲಹೆ ಪಡೆಯುವದು ಅವಶ್ಯಕವಿದೆ. ಯೋಧರ ನಾಡಾದ ಕೊಡಗಿನ ನಿವೃತ್ತ ಸೇನಾಧಿಕಾರಿಗಳೂ ಸೇರಿದಂತೆ ಪರಿಣಿತರಿಂದ ಕೇಂದ್ರ ಸರಕಾರ ಸಲಹೆಗಳನ್ನು ಪಡೆದುಕೊಳ್ಳು ವಂತಾಗಲಿ. ಆ ಮೂಲಕ ಶತ್ರುಗಳ ವಿರುದ್ಧ ಸಮರ್ಪಕ ಕಾರ್ಯಾಚರಣೆ ನಡೆಯುವಂತಾಗಲಿ ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷ ಅಡಗೂರು ವಿಶ್ವನಾಥ್ ಅಭಿಪ್ರಾಯಪಟ್ಟರು. ಇಂದು ಮಡಿಕೇರಿಗೆ ಬಂದಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದರು.ಈಗಿನ ಸನ್ನಿವೇಶದಲ್ಲಿ ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರಕ್ಕೆ ಎಲ್ಲ ಪಕ್ಷಗಳು, ಎಲ್ಲ ವರ್ಗದ ಜನ ನೈತಿಕ ಬೆಂಬಲ ನೀಡಬೇಕಿದೆ. ಯೋಧರ ಮೇಲೆ ಧಾಳಿ ನಡೆಸಿದ ಉಗ್ರಗಾಮಿಗಳ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಬೇಕಿದೆ ಎಂದು ವಿಶ್ವನಾಥ್ ಅಭಿಪ್ರಾಯಪಟ್ಟರು. ಭಾರತೀಯರಲ್ಲಿ ಎಂದೆಂದಿಗೂ ರಾಷ್ಟ್ರೀಯತೆ, ದೇಶ ಪ್ರೇಮ ಅದ್ಭುತವಾಗಿ ನೆಲೆ ನಿಂತಿದೆ. ದೇಶದ 44 ಮಂದಿ ಯೋಧರು ಹತರಾದ (ಮೊದಲ ಪುಟದಿಂದ) ಘಟನೆ ಬಳಿಕ ಹುಣಸೂರುವಿನ 6 ಮಂದಿ ಯುವಕರು ಸ್ವಯಂಪ್ರೇರಣೆಯಿಂದ ಸೇನೆ ಸೇರಿರುವದೇ ಇದಕ್ಕೆ ಸಾಕ್ಷಿಯಾಗಿದೆ. ಮಂಡ್ಯದಲ್ಲಿ ನಡೆದ ಸಂದರ್ಶನದಲ್ಲಿ ಸೇನೆಗೆ ಈ ಆರು ಮಂದಿ ಆಯ್ಕೆಗೊಂಡರು.ಅವರಿಗೆ ಅಧಿಕಾರಿಯೊಬ್ಬರಿಂದ ದೃಢೀಕರಣ ಪತ್ರ ಬೇಕಾಗಿತ್ತೆಂದು ತಮ್ಮ ಬಳಿಗೆ ಬಂದಿದ್ದಾಗ ಸೇನೆಗೆ ಸೇರುವ ಕುರಿತಾದ ಆಸಕ್ತಿ ಬಗ್ಗೆ ಅವರಲ್ಲಿ ಪ್ರಶ್ನಿಸಿದಾಗ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಲೂ ಸಿದ್ಧ. ಪೋಷಕರೂ ಸೇನೆಗೆ ಸೇರಲು ತಮಗೆ ಪ್ರೋತ್ಸಾಹಿಸಿದ್ದಾರೆ ಎಂದು ಹೆಮ್ಮೆಯಿಂದ ಆ ಯುವಕರು ಘೋಷಿಸಿದಾಗ ಇದು ಅದ್ಭುತವೆಂದೆನಿಸಿತು ಎಂದು ವಿಶ್ವನಾಥ್ ಅನುಭವದ ನುಡಿಯಾಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವರು ಸರಕಾರದ ಪರವಾಗಿ ಸಕಾಲಿಕವಾಗಿ ಕೊಡಗಿನ ಪ್ರವಾಹ ಪೀಡಿತ ಸಂತ್ರಸ್ತರ ನೆರವಿಗೆ ಸ್ಪಂದಿಸಿದ್ದಾರೆ. ಅಲ್ಲದೆ, ಪುನರ್ವಸತಿ ಕಾರ್ಯ, ರಸ್ತೆ ದುರಸ್ತಿ ನಡೆಯುತ್ತಿದೆ ಎಂದು ವಿಶ್ವನಾಥ್ ವಿವರಿಸಿದರು. ಮನೆಗಳ ನಿರ್ಮಾಣ ಇನ್ನೂ ವಿಳಂಬವಾಗುತ್ತಿದೆ. ಹಾಳಾದ ರಸ್ತೆಗಳ ದುರಸ್ತಿ ಪೂರ್ಣಗೊಳ್ಳದೆ ಅಲ್ಲಲ್ಲಿ ಮಣ್ಣಿನ ರಾಶಿ ಕಂಡುಬಂದಿದೆ ಎಂದು ಪತ್ರಕರ್ತರು ಅವರ ಗಮನಕ್ಕೆ ತಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವನಾಥ್ ಮುಖ್ಯಮಂತ್ರಿಯವರು ಸದ್ಯದಲ್ಲಿ ಮಡಿಕೇರಿಯಲ್ಲಿಯೇ ಸಭೆ ಕರೆದು ಇಂತಹ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರುವದಾಗಿ ಭರವಸೆಯಿತ್ತರು.

ರಾಜ್ಯದಲ್ಲಿ ಇತ್ತೀಚೆಗೆ ಸದನದಲ್ಲಿ ಕಂಡುಬಂದ ಟೇಪ್ ಹಗರಣಗಳ ಬಗ್ಗೆ ಪ್ರಶ್ನಿಸಿದಾಗ ಇದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿರಲಿಲ್ಲ; ಆದರೆ, ಸಭಾಧ್ಯಕ್ಷರ ಕುರಿತಾದ ಆಕ್ಷೇಪ ಬಂದಾಗ ಈ ವಿಷಯ ಗಂಭೀರತೆ ಪಡೆಯುವಂತಾಯಿತು ಎಂದರು. ಕೊಡಗಿನಲ್ಲಿ ಜೆಡಿಎಸ್‍ನ ಪದಾಧಿಕಾರಿಗಳ ನೇತಾರರಿಲ್ಲದೆ ಪಕ್ಷ ಅತಂತ್ರವಾಗಿದೆಯಲ್ಲ? ಎಂಬ ಪ್ರಶ್ನೆಗೆ ಸದ್ಯದಲ್ಲಿಯೇ ರಾಜ್ಯ ವರಿಷ್ಠರೊಂದಿಗೆ ಸಮಾಲೋಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವದಾಗಿ ವಿಶ್ವನಾಥ್ ತಿಳಿಸಿದರು. ಈ ಸಂದರ್ಭ ಜೆಡಿಎಸ್ ಪ್ರಮುಖ ಕೆ.ಎಂ ಗಣೇಶ್ ಮತ್ತಿತರರಿದ್ದರು.