ಮಡಿಕೇರಿ, ಫೆ. 17: ಕೊಡಗು ಜಿಲ್ಲೆಯಲ್ಲಿ ಭೂಪರಿವರ್ತನೆಗೆ ತಡೆ ಕಾಯ್ದೆಯಿಂದ ಉಂಟಾಗಿರುವ ಗೊಂದಲವನ್ನು ಸರಿಪಡಿಸುವ ಮೂಲಕ, ಜನರಿಗೆ ಮನೆ ಇತ್ಯಾದಿ ನಿರ್ಮಿಸಲು ಅನುವು ಮಾಡಿಕೊಡಲು ಸರಕಾರ ಕ್ರಮಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ‘ಶಕ್ತಿ’ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು, ನಿನ್ನೆ ಮುಖ್ಯಮಂತ್ರಿಗಳೊಂದಿಗೆ ಈ ಸಮಸ್ಯೆ ಬಗ್ಗೆ ಚರ್ಚಿಸಿರುವದಾಗಿ ನುಡಿದರು.ಅಲ್ಲದೆ, ಕಂದಾಯ ಇಲಾಖೆಯ ರಾಜ್ಯ ಮುಖ್ಯ ಕಾರ್ಯದರ್ಶಿ ರಾಜ್‍ಕುಮಾರ್ ಕತ್ರಿ ಅವರಿಗೆ ಸ್ಪಷ್ಟ ಸೂಚನೆ ನೀಡಿರುವ ಮುಖ್ಯಮಂತ್ರಿಗಳು, ಆದಷ್ಟು ಬೇಗನೆ ಭೂ ಪರಿವರ್ತನೆ ಗೊಂದಲವನ್ನು ನಿವಾರಿಸಬೇಕೆಂದು ಹೇಳಿರುವದಾಗಿ ವಿವರಿಸಿದರು.ಕೊಡಗಿನಲ್ಲಿ ಸರಕಾರದಿಂದ ಅಗತ್ಯವಾಗಿ ಕೈಗೊಳ್ಳಬೇಕಾಗಿರುವ ಜನಪರ ಯೋಜನೆಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಿ ಆದಷ್ಟು ಬೇಗ ಸಲ್ಲಿಸುವಂತೆಯೂ ಮುಖ್ಯಮಂತ್ರಿಗಳು ತಮಗೆ
(ಮೊದಲ ಪುಟದಿಂದ) ಆದೇಶಿಸಿದ್ದು, ಈ ಬಗ್ಗೆ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಕ್ರಮಕೈಗೊಳ್ಳುವದಾಗಿ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಸಂತ್ರಸ್ತರ ಪುನರ್ವಸತಿ ಯೋಜನೆ, ಬೆಳೆ ನಷ್ಟ ಪರಿಹಾರ, ಸಾರ್ವಜನಿಕ ರಸ್ತೆಗಳು, ಸರಕಾರಿ ಕಟ್ಟಡಗಳ ಕಾಮಗಾರಿ ಸಹಿತ ಬಾಕಿ ಉಳಿದಿರುವ ಕೆಲಸಗಳಿಗೆ ತ್ವರಿತ ಸ್ಪಂದಿಸಲು ಯೋಜನಾ ಪಟ್ಟಿ ತಯಾರಿಸಿ, ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವದು ಎಂದು ಅವರು ವಿವರಿಸಿದರು.