ಮಡಿಕೇರಿ, ಫೆ.16 : ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಲವಾರು ವರ್ಷಗಳಿಂದ ಸರ್ಕಾರಕ್ಕೆ ನಿರಂತರವಾಗಿ ಮನವಿ ಸಲ್ಲಿಸುತ್ತಾ ಬಂದಿದ್ದರೂ ಎಲ್ಲಾ ಸರ್ಕಾರಗಳು ಅವುಗಳನ್ನು ನಿರ್ಲಕ್ಷಿಸುತ್ತಲೆ ಬಂದಿವೆ.
ವರ್ಗಾವಣೆ ನೀತಿ ಜಾರಿಯಾಗಿದ್ದರೂ ಕಳೆÉದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಮಾಡದೆ ಸರ್ಕಾರ ಶಿಕ್ಷಕರಿಗೆ ಅನ್ಯಾಯವೆಸಗಿದೆ ಈಗಾಗಲೆ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಶಿಕ್ಷಕರು ಕಳೆದ ಮೂರು ವರ್ಷಗಳಿಂದ ನಿರಾಸೆಯಿಂದ ಕಾರ್ಯ ನಿರ್ವಹಿಸುವಂತಾಗಿದೆ.
ಪದವೀಧರರು ಹಾಗೂ ಇತರ ಶಿಕ್ಷಕರ ಬಡ್ತಿ ಪ್ರಕ್ರಿಯೆಯು ಸ್ಥಗಿತಗೊಂಡಿದ್ದು, ನೂತನ ಪಿಂಚಣಿ ಯೋಜನೆಯಿಂದಾಗಿ ಶಿಕ್ಷಕರು ನಿವೃತ್ತಿ ಬಳಿಕ ಬರಿಗೈಯಲ್ಲಿ ಮನೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಯೋಜನೆಯನ್ನು ಜಾರಿಗೊಳಿಸಬೇಕು. ಮುಖ್ಯೋಪಾಧ್ಯಾಯರು, ಬಡ್ತಿ ಹೊಂದುವವರಿಗೆ 10, 15, 20 ವರ್ಷಗಳ ಆರ್ಥಿಕ ಸೌಲಭ್ಯವನ್ನು ಒದಗಿಸಬೇಕು. ಸೇವಾ ಜೇಷ್ಠತೆಯನ್ನು ಪರಿಗಣಿಸುವ ಮೂಲಕ ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆಗಳನ್ನು ನಿವಾರಿಸಬೇಕು, ಶಿಕ್ಷಕರ ವೇತನ ಆಯೋಗದಲ್ಲಿ 1998 ಮತ್ತು 2003ರಲ್ಲಿ ನೇಮಕಗೊಂಡ ಶಿಕ್ಷಕರಿಗೆ ತಾರತಮ್ಯವಾಗಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು. ಪದವೀಧರ ಪ್ರಾಥಮಿಕ ಶಿಕ್ಷಕರಿಗೆ ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ಪದೋನ್ನತಿ ಪ್ರಕ್ರಿಯೆಯನ್ನು ಮರಳಿ ಆರಂಭಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.