ಮಡಿಕೇರಿ, ಫೆ. 16 : ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಕೊಡಗು ಪ್ರೆಸ್ಕ್ಲಬ್ ವತಿಯಿಂದ ಪ್ರೆಸ್ಕ್ಲಬ್ನ ಸದಸ್ಯರಿಗೆ ಆಯೋಜಿಸಲಾಗಿದ್ದ ‘ಮಾನವೀಯ ಸುದ್ದಿ ಚಿತ್ರಣ’ ಛಾಯಾಚಿತ್ರ ಸ್ಪರ್ಧೆಯಲ್ಲಿ ಕನ್ನಡಪ್ರಭ ಜಿಲ್ಲಾ ವರದಿಗಾರ ವಿಘ್ನೇಶ್ ಎಂ. ಭೂತನಕಾಡು ಹಾಗೂ ವೀಡಿಯೋಗ್ರಫಿ ಸ್ಪರ್ಧೆಯಲ್ಲಿ ಚಿತ್ತಾರ ವಾಹಿನಿಯ ವಿಶ್ವ ಕುಂಬೂರು ಪ್ರಥಮ ಬಹುಮಾನ ಗಳಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಶುಕ್ರವಾರ ಸಂಜೆ ಛಾಯಾಚಿತ್ರ ಹಾಗೂ ವಿಡಿಯೋಗ್ರಫಿ ಸ್ಪರ್ಧೆಯ ತೀರ್ಪುಗಾರಿಕೆ ನಡೆಯಿತು. ತೀರ್ಪುಗಾರಿಕೆ ಕಾರ್ಯಕ್ರಮವನ್ನು ಸೋಮವಾರಪೇಟೆ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಉದ್ಘಾಟಿಸಿದರು. ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜಯವಾಣಿ ಸಿದ್ದಾಪುರ ವರದಿಗಾರ ಎಂ.ಎ. ಅಜೀಜ್ ದ್ವಿತೀಯ, ಕನ್ನಡಪ್ರಭ ಸಿದ್ದಾಪುರ ವರದಿಗಾರ ಆರ್. ಸುಬ್ರಮಣಿ ತೃತೀಯ ಹಾಗೂ ವೀಡಿಯೋಗ್ರಫಿ ಸ್ಪರ್ಧೆಯಲ್ಲಿ ಬಿಟಿವಿ ಜಿಲ್ಲಾ ವರದಿಗಾರ ಗೋಪಾಲ್ ಸೋಮಯ್ಯ ದ್ವಿತೀಯ, ಎಎನ್ಐ ಜಿಲ್ಲಾ ವರದಿಗಾರ ತೇಜಸ್ ಪಾಪಯ್ಯ ತೃತೀಯ ಬಹುಮಾನ ಗಳಿಸಿದರು.
ಕೊಡಗಿನ ಛಾಯಾಗ್ರಾಹಕರಾದ ಮಾಚಯ್ಯ ಮಾಚು ಅಮ್ಮತ್ತಿ, ಬಿಷನ್ ಮೊಣ್ಣಪ್ಪ, ಹರ್ಷಿತ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿಜೇತರಿಗೆ ರೂ.5,000, ದ್ವಿತೀಯ ರೂ.3,000 ಹಾಗೂ ತೃತೀಯ 2,000 ರೂ ಪ್ರತ್ಯೇಕ ವಿಭಾಗದಲ್ಲಿ ನಗದು ಹಾಗೂ ಪ್ರಶಸ್ತಿ ಫಲಕ ನೀಡಲಾಗುತ್ತಿದೆ. ಸ್ಪರ್ಧಾ ವಿಜೇತರಿಗೆ ತಾ.23 ರಂದು ಪತ್ರಿಕಾ ಭವನದಲ್ಲಿ ನಡೆಯುವ ಪ್ರೆಸ್ಕ್ಲಬ್ನ 20ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುವದು ಎಂದು ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ತಿಳಿಸಿದ್ದಾರೆ.