ಸಿದ್ದಾಪುರ, ಫೆ 15: ಇತ್ತೀಚೆಗೆ ಹತ್ಯೆಯಾದ ಅಪ್ರಾಪ್ತ ವಿದ್ಯಾರ್ಥಿನಿಯ ನಿವಾಸಕ್ಕೆ ತೆರಳಿ ಪೋಷಕರಿಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಸಾಂತ್ವನ ಹೇಳಿದರು. ಸಿದ್ದಾಪುರದ ಮೈಸೂರು ರಸ್ತೆಯ ಎಮ್ಮೆಗುಂಡಿ ಸಿದ್ದಾಪುರ ಡಿವಿಷನ್ ಕಾಫಿ ತೋಟದಲ್ಲಿರುವ ವಿದ್ಯಾರ್ಥಿನಿಯ ಲೈನ್ ಮನೆಗೆ ತೆರಳಿ ಸಾಂತ್ವನ ಹೇಳಿದ ಶಾಸಕರು; ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಆದಷ್ಟು ಬೇಗ ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ತಲುಪಲಿದೆ ಎಂದು ಹೇಳಿದರು.
ಈ ಸಂದರ್ಭ ಕಾರ್ಮಿಕರು ಮಾತನಾಡಿ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯದ ಕಾರ್ಮಿಕರೇ ಇದ್ದು, ಪ್ರತಿನಿತ್ಯ ಜೀವಭಯದಿಂದ ಬದುಕುವಂತಾಗಿದೆ ಎಂದು ಅಳಲು ತೋಡಿಕೊಂಡರು. ತಾವು ಹಲವಾರು ವರ್ಷಗಳಿಂದ ಲೈನ್ ಮನೆಯಲ್ಲಿ ವಾಸವಿದ್ದು ತಮಗೆ ಸರಕಾರದ ವತಿಯಿಂದ ಶಾಶ್ವತ ನಿವೇಶನ ನೀಡಬೇಕೆಂದು ಮನವಿ ಮಾಡಿದರು. ಕಾರ್ಮಿಕರ ಮನವಿಗೆ ಸ್ಪಂದಿಸಿದ ಶಾಸಕರು ಹೊರ ರಾಜ್ಯದ ಕಾರ್ಮಿಕರನ್ನು ಹೊರತುಪಡಿಸಿ, ಲೈನ್ ಮನೆಯಲ್ಲಿ ವಾಸವಿರುವ ನಿವಾಸಿಗಳ ಪಟ್ಟಿ ನೀಡುವಂತೆ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವದೆಂದು ಭರವಸೆ ನೀಡಿದರು. ಅಲ್ಲದೆ ಸಿದ್ದಾಪುರ ವ್ಯಾಪ್ತಿಯ ತೋಟದ ಮನೆಗಳಲ್ಲಿ ವಾಸವಿರುವ ಹೊರರಾಜ್ಯದ ಕಾರ್ಮಿಕರ ಕುರಿತಾದ ಸಂಪೂರ್ಣ ಮಾಹಿತಿ ಪಡೆಯುವಂತೆ ಸಿದ್ದಾಪುರ ಠಾಣಾಧಿಕಾರಿ ದಯಾನಂದ್ ಅವರಿಗೆ ಸೂಚಿಸಿದರು. ಈ ಸಂದರ್ಭ ತಾ.ಪಂ. ಸದಸ್ಯ ಡೆನ್ನಿಸ್, ಬಿಜೆಪಿ ಪಕ್ಷದ ಪ್ರಮುಖರಾದ ಮಲ್ಲಂಡ ಮಧು ದೇವಯ್ಯ, ಅನಿಲ್ ಶೆಟ್ಟಿ, ಹರಿದಾಸ್ ಮತ್ತಿತರರು ಹಾಜರಿದ್ದರು.