ಮಡಿಕೇರಿ, ಫೆ. 15: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿಶೇಷಚೇತನ ಪ್ರಯಾಣಿಕರಿಗೆ ತಮ್ಮ ವಾಸ ಸ್ಥಳದಿಂದ 100 ಕಿ.ಮೀ. ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್ ಪಾಸ್‍ಗಳನ್ನು ವಿತರಿಸುತ್ತಿದ್ದು, 2018ನೇ ಸಾಲಿನಲ್ಲಿ ವಿತರಿಸಿರುವ ರಿಯಾಯಿತಿ ಬಸ್ ಪಾಸ್‍ಗಳ ಅವಧಿಯು ತಾ. 31.12.2018 ಕ್ಕೆ ಮುಕ್ತಾಯಗೊಂಡಿರುತ್ತದೆ. ಅಂಗವಿಕಲರ ಕಲ್ಯಾಣ ಇಲಾಖೆಯಿಂದ ನೀಡಿರುವ ಅಂಗವಿಕಲರ ಮೂಲ ಗುರುತಿನ ಚೀಟಿಯ ಯಥಾ ಪ್ರತಿ, ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಪ್ರತಿ ಹಾಗೂ ಪಾಸ್‍ಪೋರ್ಟ್ ಸೈಜಿನ 2 ಫೋಟೋ, ಅಂಚೆ ಚೀಟಿ ಗಾತ್ರದ 1 ಫೋಟೋ ಹಾಗೂ ರೂ. 660 ಗಳ ನಗದು ಪಾವತಿಸಿ ಪಾಸು ಪಡೆಯಬಹುದಾಗಿದೆ. ವಿಶೇಷಚೇತನರ ರಿಯಾಯಿತಿ ದರದ ಬಸ್ ಪಾಸುಗಳನ್ನು ನವೀಕರಣಗೊಳಿಸುವ ಸಂದರ್ಭ ಫಲಾನುಭವಿಗಳು ಕಡ್ಡಾಯವಾಗಿ ಈ ಹಿಂದೆ ವಿತರಿಸಿರುವ ಹಳೆ ಪಾಸನ್ನು ಹಿಂತಿರುಗಿಸಬೇಕಾಗಿರುತ್ತದೆ.
ಪ್ರಸ್ತುತ ನಿಗಮ 2018ನೇ ಸಾಲಿನಲ್ಲಿ ವಿತರಿಸಲಾಗಿರುವ ವಿಶೇಷಚೇತನರ ಬಸ್ ಪಾಸ್‍ಗಳನ್ನು ತಾ. 28.2.2019 ರವರೆಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ತಾ. 1.1.2019 ರಿಂದ 28.2.2019 ರೊಳಗಾಗಿ ಸದರಿ ಪಾಸ್‍ಗಳನ್ನು ನವೀಕರಿಸಲು ಸೂಚಿಸಲಾಗಿದೆ.
ಈಗಾಗಲೇ ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕುಶಾಲನಗರ, ವೀರಾಜಪೇಟೆ, ಸೋಮವಾರಪೇಟೆ, ಮಡಿಕೇರಿಯಲ್ಲಿ ಪಾಸ್ ನವೀಕರಣ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು, ಇನ್ನೂ ಬಾಕಿ ಇರುವ ವಿಶೇಷಚೇತನರ ರಿಯಾಯಿತಿ ದರದ ಪಾಸ್‍ಗಳನ್ನು ಮಡಿಕೇರಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ತಾ. 22.2.2019 ರಂದು ಸೂಕ್ತ ದಾಖಲಾತಿಗಳನ್ನು ಹಾಜರುಪಡಿಸಿದಲ್ಲಿ 1 ವಾರದೊಳಗೆ ನವೀಕರಿಸಿ ಕೊಡಲಾಗುವದು.
ಅಲ್ಲದೇ ಅಂಗವಿಕಲರ ಅಧಿನಿಯಮ ಅನುಸಾರ ಶೇ. 40 ಮತ್ತು ಅದಕ್ಕಿಂತ ಹೆಚ್ಚು ಪ್ರಮಾಣದ ಅಂಗವಿಕಲತೆ ಹೊಂದಿರುವ ವಿಶೇಷಚೇತನರಿಗೆ ಹೊಸ ಪಾಸ್‍ಗಳನ್ನು ಪಡೆಯಲು ಅಂಗವಿಕಲರ ಕಲ್ಯಾಣ ಇಲಾಖೆ ನೀಡಿರುವ ಗುರುತಿನ ಚೀಟಿಯ ಯಥಾ ಪ್ರತಿ ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಪ್ರತಿ, ಪಾಸ್‍ಪೋರ್ಟ್ ಅಳತೆಯ 2 ಫೋಟೋ, ಅಂಚೆ ಚೀಟಿ ಗಾತ್ರದ 1 ಫೋಟೋ ನೀಡಿ ಫಲಾನುಭವಿಗಳು ವಿಭಾಗೀಯ ಕಚೇರಿ ಕ.ರಾ.ರ.ಸಾ. ನಿಗಮ, ಪುತ್ತೂರು ವಿಭಾಗ, ಮುಕ್ರಂಪಾಡಿ ದರ್ಬೆ, ಪುತ್ತೂರು - 574202. ನೇರವಾಗಿ ಅರ್ಜಿ ಸಲ್ಲಿಸಿ ಪಾಸ್ ಪಡೆಯಬಹುದಾಗಿದೆ.