ಕುಶಾಲನಗರ, ಫೆ. 15: ಕುಶಾಲನಗರವನ್ನು ಕೇಂದ್ರವಾಗಿರಿಸಿ ಕೊಂಡು ಕಾವೇರಿ ತಾಲೂಕು ರಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕಾವಲುಪಡೆ ವತಿಯಿಂದ ಬೈಕ್ ರ್ಯಾಲಿ ನಡೆಸಲಾಯಿತು.

ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಕೂಡಿಗೆಯಿಂದ ಬೈಕ್‍ಗಳ ಮೂಲಕ ಮುಖ್ಯರಸ್ತೆಯಲ್ಲಿ ಜಾಥಾ ನಡೆಸಿದರು. ಬೈಕ್‍ಗೆ ಸಂಘಟನೆಯ ಬಾವುಟಗಳನ್ನು ಅಳವಡಿಸಿಕೊಂಡು ಕುಶಾಲನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದವರೆಗೆ ಸಾಗಿಬಂದ ಜಾಥಾ ನಾಡಕಚೇರಿ ಬಳಿ ಸಮಾಪ್ತಿಗೊಂಡಿತು. ನಂತರ ಕೆಲಕಾಲ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಾಲೂಕು ರಚನೆಗೆ ಆಗ್ರಹಿಸಲಾಯಿತು. ಕಂದಾಯ ಇಲಾಖೆ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಎಂ.ಕೃಷ್ಣ, ಕಳೆದ 25 ವರ್ಷಗಳ ಕಾಲ ಕಾವೇರಿ ತಾಲೂಕಿನ ಬೇಡಿಕೆಗೆ ಯಾವದೇ ಮಾನ್ಯತೆ ದೊರೆತಿಲ್ಲ. ತಾಲೂಕು ರಚನೆಗೆ ಪೂರಕವಾದ ಎಲ್ಲಾ ಅರ್ಹತೆಗಳು ಹೊಂದಿದ್ದರೂ ಕೂಡ ಕುಶಾಲನಗರವನ್ನು ಪ್ರತ್ಯೇಕ ತಾಲೂಕಾಗಿ ಘೋಷಿಸುವಲ್ಲಿ ಸರಕಾರಗಳು ನಿರ್ಲಕ್ಷ್ಯ ವಹಿಸಿವೆ. ತಕ್ಷಣ ನೂತನ ತಾಲೂಕು ರಚನೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವಂತೆ ಆಗ್ರಹಿಸಿದರು.

ಈ ಸಂದರ್ಭ ಕಾವಲುಪಡೆಯ ವಿವಿಧ ಘಟಕಗಳ ಪದಾಧಿಕಾರಿಗಳಾದ ಉಣ್ಣಿಕೃಷ್ಣ, ಅನೀಶ್, ಅಭಿಷೇಕ್, ಮಹಮ್ಮದ್, ನಿಜಾಮುದ್ದಿನ್, ಸುಬೇರ್, ರಾಮಕೃಷ್ಣ, ವಿಜಯಕುಮಾರ್, ಅನಿಲ್, ಹರೀಶ್ ಮತ್ತಿತರರು ಇದ್ದರು.