ಗೋಣಿಕೊಪ್ಪ ವರದಿ. ಫೆ. 15: ಅಪಘಾತದಿಂದ ಪ್ರಾಣ ರಕ್ಷಿಸಿಕೊಳ್ಳುವದಕ್ಕಾಗಿ ಮುನ್ನೆಚ್ಚರಿಕೆ ವಹಿಸುವದು ಅಗತ್ಯ ಎಂದು ಪೊನ್ನಂಪೇಟೆ ಸಬ್ ಇನ್ಸ್‍ಪೆಕ್ಟರ್ ಮಹೇಶ್ ಹೇಳಿದರು.
ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೈಕ್ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವದು ಕಡ್ಡಾಯ ಇದರಿಂದ ಶೇ. 90 ರಷ್ಟು ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳಬಹುದು ಎಂದು ತಿಳಿಸಿದರು.
ಮದ್ಯಪಾನ ಮಾನಸಿಕ ಸ್ಥಿಮಿತವನ್ನು ಕಡಿಮೆ ಮಾಡುತ್ತದೆ. ಮನಸ್ಸು ನಿಯಂತ್ರಣದಲ್ಲಿ ಇಲ್ಲದೆ ಇರುವಾಗ ಅಪಘಾತಗಳು ಹೆಚ್ಚು ಸಂಭವಿಸುತ್ತವೆ. ವಾಹನ ವಿಮೆ ಮಾಡಿಸುವದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಮಾತನಾಡಿ, ಕಾನೂನು ಅರಿವಿನ ಕೊರತೆಯಿಂದ ಅಪರಾಧಗಳು ಹೆಚ್ಚುತ್ತಿವೆ. ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕೆಲಸ ಮಾಡುತ್ತಿರುವದರಿಂದ ಇಲಾಖೆಯ ಬಗ್ಗೆ ಜನತೆಗೆ ಇದ್ದ ಆತಂಕ ದೂರವಾಗಿದೆ ಎಂದು ಹೇಳಿದರು. ಸಹಾಯಕ ಉಪನಿರೀಕ್ಷಕ ಪಿ. ಉದಯಕುಮಾರ್, ಪೊಲೀಸ್ ಸಿಬ್ಬಂದಿ ಎಸ್. ಮಣಿಕಂಠ ಉಪಸ್ಥಿತರಿದ್ದರು.