ಸೋಮವಾರಪೇಟೆ, ಫೆ. 14: ಬೆಳೆಗಾರರು ತಮ್ಮ ಸ್ವಂತ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಕೃಷಿ ಉದ್ದೇಶಕ್ಕಾಗಿ ಪಂಪ್‍ಸೆಟ್‍ಗಳನ್ನು ಅಳವಡಿಸಿಕೊಂಡಿದ್ದು, ಇದೀಗ ವಿದ್ಯುತ್ ಇಲಾಖೆಯವರು ಏಕಾಏಕಿ ಪಂಪ್‍ಸೆಟ್‍ಗಳಿಗೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್‍ನ್ನು ಸ್ಥಗಿತಗೊಳಿಸುತ್ತಿದ್ದಾರೆ ಎಂದು ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳೆಗಾರರು ತಮ್ಮ ಜಮೀನಿನಲ್ಲಿ ನೀರಾವರಿಗೆಂದು 5, 10 ಹೆಚ್.ಪಿ. ಪಂಪ್ ಅಳವಡಿಸಿಕೊಂಡಿದ್ದು, ವರ್ಷದಲ್ಲಿ ಒಂದೆರಡು ತಿಂಗಳು ಮಾತ್ರ ಕಾಫಿ ತೋಟಕ್ಕೆ ನೀರು ಹಾಯಿಸುತ್ತಾರೆ. ವರ್ಷ ಪ್ರಾರಂಭದ ಫೆಬ್ರವರಿ ಮತ್ತು ಮಾರ್ಚ್‍ನಲ್ಲಿ ಕಾಫಿ ಹೂವಿಗಾಗಿ ನೀರು ಹಾಯಿಸಲಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ವಿದ್ಯುತ್ ಇಲಾಖಾ ಸಿಬ್ಬಂದಿಗಳು, ಸರ್ಕಾರದ ಆದೇಶವಿದೆ ಎಂದು ಹೇಳಿ ವಿದ್ಯುತ್ ಸ್ಥಗಿತಗೊಳಿಸುತ್ತಿರುವದು ಖಂಡನೀಯ ಎಂದು ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಹೇಳಿದ್ದಾರೆ.

ಪಂಪ್‍ಸೆಟ್‍ಗಳಿಗೆ ನೀಡಲಾಗಿರುವ ಸಂಪರ್ಕವನ್ನು ಯಾವದೇ ಮಾಹಿತಿ ನೀಡದೇ ಅನಿರೀಕ್ಷಿತವಾಗಿ ಕಡಿತಗೊಳಿಸಲಾಗುತ್ತಿದೆ. ಈ ಕ್ರಮದಿಂದ ಕಾಫಿ ತೋಟಗಳ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದ್ದು, ಗಿಡಗಳಲ್ಲಿ ಹೂ ಬಿಡುವ ಸಂದರ್ಭ ನೀರು ಹಾಯಿಸದಿದ್ದರೆ, ಮುಂದಿನ ವರ್ಷದಲ್ಲಿ ಕಾಫಿಯ ಉತ್ಪಾದನೆ ಗಣನೀಯವಾಗಿ ಇಳಿಕೆಯಾಗುತ್ತದೆ. ಇದರೊಂದಿಗೆ ಬೆಳೆಗಾರರೂ ತೊಂದರೆಗೆ ಒಳಗಾಗಲಿದ್ದಾರೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಮುಖ್ಯಮಂತ್ರಿಗಳಿಗೂ ದೂರು ನೀಡಲಾಗಿದೆ ಎಂದು ಸಂಘದ ಕಾರ್ಯದರ್ಶಿ ಎಸ್.ಸಿ. ಪ್ರಕಾಶ್ ತಿಳಿಸಿದ್ದಾರೆ.