ವೀರಾಜಪೇಟೆ, ಫೆ. 13: ವೀರಾಜಪೇಟೆ ಕೊಡವ ಸಮಾಜ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ಪ್ರಕೃತಿ ವಿಕೋಪದಲ್ಲಿ ನೊಂದ ಸುಮಾರು 21 ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಲಾಯಿತು.
ಕೊಡವ ಸಮಾಜ ರಿಕ್ರಿಯೇಶನ್ ಕ್ಲಬ್ನಿಂದ ರೂ 3.20 ಲಕ್ಷ ಹಾಗೂ ಕಾಕೋಟುಪರಂಬು ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ನಿಂದ ರೂ. 1 ಲಕ್ಷವನ್ನು ಸಂತ್ರಸ್ತ ಕುಟುಂಬಗಳಿಗೆ ವಿತರಿಸಲಾಯಿತು. ಉತ್ತರ ಕೊಡಗಿನ ಹೆಮ್ಮೆತ್ತಾಳು, ಮೇಘತ್ತಾಳು, ಮೂವತೋಕ್ಲು, ಕಾಲೂರು, ವೀರಾಜಪೇಟೆಯ ಬಿಳುಗುಂದ ಗ್ರಾಮದ ಸಂತ್ರಸ್ತರಿಗೆ ತಲಾ 20 ಸಾವಿರದಂತೆ ಒಟ್ಟು 4.20 ಲಕ್ಷ ರೂ.ಗಳನ್ನು ಹಾಗೂ ಮ್ಯೆಸೂರಿನ ಕಿಚನ್ ಕಲೆಕ್ಷನ್ಸ್ನ ದುರ್ಗಾ ಪ್ರಸಾದ್ ಅವರ ಅಡುಗೆ ಪಾತ್ರೆ ಸಾಮಗ್ರಿಗಳನ್ನು ಇಲ್ಲಿನ ವೃತ್ತ ನಿರೀಕ್ಷಕ ಕ್ಯಾತೆಗೌಡ ವಿತರಿಸಿದರು.
ಇದೇ ಸಂದರ್ಭ ಸಂತ್ರಸ್ತೆ ಮುಕ್ಕಾಟ್ಟಿರ ತಂಗಮ್ಮ ಮಾತನಾಡಿ, ಪ್ರಕೃತಿ ವಿಕೋಪದಲ್ಲಿ ನನ್ನ ಪತಿಯನ್ನು ಕಳೆದುಕೊಂಡಿದ್ದೇನೆ. ಆಸರೆಗಾಗಿ ಇದ್ದ ಮನೆಯು ಕೊಚ್ಚಿ ಹೋಗಿದೆ. ಅವರಿವರ ಮನೆಯಲ್ಲಿ ಜೀವನ ಸಾಗಿಸುತ್ತಿದ್ದೇನೆ. ಈವರೆಗೆ ಸರ್ಕಾರದಿಂದ ಯಾವದೇ ಪರಿಹಾರ ದೊರೆತಿಲ್ಲ. ಸಂಘ-ಸಂಸ್ಥೆಗಳು ಒಂದಷ್ಟು ನೀಡಿದ ನೆರವಿನಿಂದ ಜೀವನ ಸಾಗಿಸುತ್ತಿದ್ದೇನೆ ಎಂದು ಅಳಲು ತೋಡಿಕೊಂಡರು. ರಿಕ್ರಿಯೇಶನ್ ಕ್ಲಬ್ನ ಉಪಾಧ್ಯಕ್ಷ ಮೂಳೆರ ಉಮೇಶ್ ಉತ್ತಪ್ಪ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವೀರಾಜಪೇಟೆ ಕೊಡವ ಸಮಾಜದ ರಿಕ್ರಿಯೇಶನ್ ಕ್ಲಬ್ನ ಜಂಟಿ ಕಾರ್ಯದರ್ಶಿ ನೆಲ್ಲಮಕ್ಕಡ ಪವನ್, ಕೊಡವ ಸಮಾಜದ ಕಾರ್ಯದರ್ಶಿ ಕುಪ್ಪಣಮಾಡ ಬಿದ್ದಪ್ಪ, ನಿರ್ದೇಶಕರುಗಳಾದ ಪಟ್ರಪಂಡ ರಘು ನಾಣಯ್ಯ, ವಾಟೇರಿರ ಪೊನ್ನಪ್ಪ, ಮಲ್ಲಂಡ ಮಧು ದೇವಯ್ಯ, ಮಾತಂಡ ಪವಿ ಮುದ್ದಪ್ಪ, ಕಾಕೋಟುಪರಂಬು ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ಮೇವಡ ಚಿಣ್ಣಪ್ಪ, ವೀರಾಜಪೇಟೆ ಕ್ಲಬ್ನ ವ್ಯವಸ್ಥಾಪಕ ಪುಗ್ಗೇರ ಯು. ಮೊಣ್ಣಯ್ಯ ಉಪಸ್ಥಿತರಿದ್ದರು.