ಮಡಿಕೇರಿ ಫೆ.13 : ಕೊಡಗಿನಲ್ಲಿ ಭೂ ಕುಸಿತದಿಂದ ಹಾನಿಗೀಡಾದ ಪ್ರದೇಶದ ನಿರಾಶ್ರಿತರು ಸಲ್ಲಿಸಿರುವ ಅರ್ಜಿಗಳ ಸಂಖ್ಯೆ ಎಷ್ಟು, ಇವುಗಳಲ್ಲಿ ಎಷ್ಟು ಜನರಿಗೆ ಪರಿಹಾರ ನೀಡಲಾಗಿದೆ ಎಂದು ಶಾಸಕ ಎಂ.ಪಿ.ಸುನೀಲ್ ಸುಬ್ರಮಣಿ ಅವರು ಕಂದಾಯ ಸಚಿವರನ್ನು ವಿಧಾನ ಪರಿಷತ್‍ನಲ್ಲಿ ಪ್ರಶ್ನಿಸಿದ್ದಾರೆ.

ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು, ಈವರೆಗೂ 4064 ಅರ್ಜಿಗಳು ಸ್ವೀಕೃತಗೊಂಡಿದ್ದು, ಇವುಗಳಲ್ಲಿ 4024 ಜನರಿಗೆ ಪರಿಹಾರ ನೀಡಲಾಗಿದೆ. ನಿರಾಶ್ರಿತರ ಪಟ್ಟಿಯಲ್ಲಿ , ಮಡಿಕೇರಿ ತಾಲೂಕು, 1955 ನಿರಾಶ್ರಿತರಾಗಿದ್ದು 1955 ಸಂಖ್ಯೆ ಪರಿಹಾರ ವಿತರಣೆ ಮಾಡಲಾಗಿದೆ. ಸೋಮವಾರಪೇಟೆ ತಾಲೂಕು 1548 ನಿರಾಶ್ರಿತರಾಗಿದ್ದು, 1508 ನಿರಾಶ್ರಿತರಿಗೆ ಪರಿಹಾರ ವಿತರಣೆ ಮಾಡಲಾಗಿದೆ. ವೀರಾಜಪೇಟೆ ತಾಲೂಕು 561 ನಿರಾಶ್ರಿತರಾಗಿದ್ದು, 561 ನಿರಾಶ್ರಿತರಿಗೆ ಪರಿಹಾರ ವಿತರಣೆಯಾಗಿದ್ದು, ಒಟ್ಟು ನಿರಾಶ್ರಿತರ ಸಂಖ್ಯೆ 4064 ಹಾಗೂ 4024 ಮಂದಿಗೆ ಪರಿಹಾರ ವಿತರಣೆಯಾಗಿದೆ ಎಂದು ಸಚಿವ ಯು.ಟಿ. ಖಾದರ್ ಮಾಹಿತಿ ನೀಡಿದರು.

ಮಳೆಯಿಂದ ಹಾನಿಗೀಡಾದ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವ ಕಾರ್ಯದಲ್ಲಿ ಇಲ್ಲಿಯವರೆಗೆ ಕಟ್ಟಲಾಗಿರುವ ಮನೆಗಳೆಷ್ಟು ಎಂಬ ಸುನಿಲ್ ಸುಬ್ರಮಣಿ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು ಪ್ರವಾಹದಿಂದಾಗಿ 840 ಕುಟುಂಬಗಳು ಸಂತ್ರಸ್ತರಾಗಿದ್ದು, ಎಲ್ಲಾ ಕುಟುಂಬಗಳಿಗೂ ಮನೆ ನಿರ್ಮಿಸಲು ತೀರ್ಮಾನಿಸಲಾಗಿದೆ. 840 ಮನೆಗಳ ಪೈಕಿ 770 ಮನೆಗಳನ್ನು ತುರ್ತಾಗಿ ನಿರ್ಮಿಸಲು ನಿರ್ಮಾಣ ಕಾರ್ಯವನ್ನು ಕರ್ನಾಟಕ ಹ್ಯಾಬಿಟೇಟ್ ಸಂಸ್ಥೆಗೆ ವಹಿಸಿದ್ದು, ಗ್ರಾಮವಾರು ಪಟ್ಟಿಯಲ್ಲಿ ಕರ್ಣಂಗೇರಿ 40, ಬಿಳಿಗೇರಿ 30, ಗಾಳಿಬೀಡು 125, ಮದೆ 175, ಜಂಬೂರು 400 ಮನೆ ನಿರ್ಮಿಸುತ್ತಿದ್ದು, ಒಟ್ಟು 770 ಮನೆ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಮನೆಗಳನ್ನು ಕಳೆದುಕೊಂಡ ಜನರಿಗೆ ತಿಂಗಳ ಲೆಕ್ಕದಲ್ಲಿ ಬಾಡಿಗೆ ಹಣವನ್ನು ನೀಡುವ ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ಎಷ್ಟು ಜನರಿಗೆ ಹಣ ಭರಿಸಲಾಗಿದೆ ಎಂಬ ಸುನಿಲ್ ಸುಬ್ರಮಣಿ ಪ್ರಶ್ನೆಗೆ ಕಂದಾಯ ಸಚಿವರು, ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡ 480 ಕುಟುಂಬಗಳಿಗೆ ಹಣ ನೀಡಲಾಗಿದ್ದು, ರೂ.48 ಲಕ್ಷ ಮೊತ್ತವನ್ನು ಬಾಡಿಗೆಗಾಗಿ ನೀಡಲಾಗಿದೆ ಎಂದು ಉತ್ತರಿಸಿದರು.