ಸೋಮವಾರಪೇಟೆ, ಫೆ. 13: ಹಾಸನದ ಶಾಸಕ, ಬಿಜೆಪಿಯ ಪ್ರೀತಮ್ ಗೌಡ ಅವರ ಮನೆ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲಿನ ಧಾಳಿ ಪ್ರಕರಣವನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವ ಹೆಚ್.ಡಿ. ರೇವಣ್ಣ ಅವರುಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಹಾಸನವನ್ನು ತಮ್ಮ ಮನೆಯ ಸ್ವತ್ತೆಂದು ತಿಳಿದಿದ್ದ ಕುಮಾರಸ್ವಾಮಿ ಮತ್ತು ರೇವಣ್ಣ ಅವರಿಗೆ ಬಿಜೆಪಿಯ ಪ್ರೀತಮ್ ಗೌಡ ಅವರ ಗೆಲುವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಮುಂದುವರೆದ ಭಾಗವಾಗಿ ಜೆಡಿಎಸ್‍ನ ಕಾರ್ಯಕರ್ತರ ಸೋಗಿನಲ್ಲಿರುವ ಗೂಂಡಾಗಳು ಶಾಸಕರ ಮನೆ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಧಾಳಿ ನಡೆಸಿದ್ದಾರೆ ಎಂದು ಪ್ರತಿಭಟನೆಯಲ್ಲಿದ್ದ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಆರೋಪಿಸಿದರು.

ಶಾಸಕರ ನಿವಾಸದ ಮೇಲೆ ಧಾಳಿ ನಡೆಸಿದರೂ ಪೊಲೀಸರು ಮೌನಕ್ಕೆ ಶರಣಾಗಿರುವದರ ಹಿಂದೆ ಸಮ್ಮಿಶ್ರ ಸರ್ಕಾರ ಮತ್ತು ಹಾಸನದ ಉಸ್ತುವಾರಿ ಸಚಿವ ರೇವಣ್ಣ ಅವರ ಪಾತ್ರ ಅಡಗಿರುವ ಶಂಕೆಯಿದೆ. ತಕ್ಷಣ ಹಲ್ಲೆ ನಡೆಸಿದ ಗೂಂಡಾಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಮುಖ್ಯಮಂತ್ರಿ ಮತ್ತು ಎಲ್ಲಾ ಮಂತ್ರಿಗಳ ಮನೆ ಎದುರು ಯುವ ಮೋರ್ಚಾದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಬಿಜೆಪಿ ಪ್ರಮುಖರಾದ ಮನುಕುಮಾರ್ ರೈ, ಯುವ ಮೋರ್ಚಾ ಅಧ್ಯಕ್ಷ ಸುನಿಲ್ ಅವರುಗಳು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ, ಪ.ಪಂ. ಸದಸ್ಯ ಮಹೇಶ್, ನಗರ ಬಿಜೆಪಿ ಅಧ್ಯಕ್ಷ ಸೋಮೇಶ್, ಪ್ರಮುಖರಾದ ಶರತ್‍ಚಂದ್ರ, ಅಶೋಕ್, ಪ್ರವೀಣ್, ಪಿ. ಮಧು, ನೆಹರು, ಜಗದೀಶ್, ಮೂರ್ತಿ, ಜೆ.ಸಿ. ಶೇಖರ್, ಲೀಲಾ ನಿರ್ವಾಣಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಕುಶಾಲನಗರ: ಶಾಸಕ ಪ್ರೀತಂ ಗೌಡ ಅವರ ಮನೆ ಮೇಲೆ ಧಾಳಿ ನಡೆಸಿ ಕಾರ್ಯಕರ್ತರಿಗೆ ಕಲ್ಲಿನಿಂದ ಹಲ್ಲೆ ಮಾಡಿದ ಘಟನೆಯನ್ನು ಖಂಡಿಸಿ ತಾಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ತಾ. 14 ರಂದು (ಇಂದು) ಬೆಳಿಗ್ಗೆ 10.30 ಕ್ಕೆ ಕುಶಾಲನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಯುವ ಮೋರ್ಚಾ ಕಾರ್ಯಾಧ್ಯಕ್ಷ ಎಂ.ಡಿ. ಕೃಷ್ಣಪ್ಪ ತಿಳಿಸಿದ್ದಾರೆ.

ಮಡಿಕೇರಿ: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ರಾಜ್ಯದ ಗೂಂಡಾ ಸರ್ಕಾರದ ವಿರುದ್ಧ ಮತ್ತು ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡರ ಮನೆ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವ ರೇವಣ್ಣರ ಮಾತಿನಿಂದ ಪ್ರಚೋದನೆಗೊಂಡು ಧಾಳಿ ಮಾಡಿದ ಜೆಡಿಎಸ್ ಕಾರ್ಯಕರ್ತರ ಗೂಂಡಾ ಪ್ರವೃತ್ತಿಯನ್ನು ಖಂಡಿಸಿ ಜ.ತಿಮ್ಮಯ್ಯ ವೃತ್ತದಲ್ಲಿ ತಾ. 14 ರಂದು (ಇಂದು) 11 ಗಂಟೆಗೆ ಮಡಿಕೇರಿ ನಗರ ಬಿಜೆಪಿ ಮತ್ತು ತಾಲೂಕು ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಗರಾಧ್ಯಕ್ಷ ಮಹೇಶ್ ಜೈನಿ ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಕೂಡ ಧಾಳಿ ಖಂಡಿಸಿ ಏಕಕಾಲದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಮನುಮುತ್ತಪ್ಪ ತಿಳಿಸಿದ್ದಾರೆ.