ಮಡಿಕೇರಿ, ಫೆ. 13: ಕರ್ನಾಟಕ ಜಾನಪದ ಕಲೆಯ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಜಾನಪದ ಕ್ಷೇತ್ರದಲ್ಲಿನ ಜೀವಮಾನದ ಸಾಧನೆಗಾಗಿ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ನೀಡಲಾಗುವ 2019ನೇ ಸಾಲಿನ ‘ಶ್ರೀ ನಾಡೋಜ ಹೆಚ್.ಎಲ್. ನಾಗೇಗೌಡ - ಜಾನಪದ ಲೋಕಶ್ರೀ’ ಪ್ರಶಸ್ತಿಗೆ ಕೊಡಗಿನ ತಟ್ಟಕೆರೆ ಗಿರಿಜನ ಕಾಲೋನಿಯ ಸೋರೆ ಬುರುಡೆ ಜಾನಪದ ಕಲಾವಿದ ಜೇನುಕುರುಬರ ಮರಿ ಆಯ್ಕೆಯಾಗಿದ್ದಾರೆ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದ್ದಾರೆ. ತಾ. 17 ರಂದು ರಾಮನಗರ ಜಾನಪದ ಲೋಕದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಹಾಗೂ ರೂ. 15,000 ನಗದು ನೀಡಿ ಗೌರವಿಸಲಾಗುತ್ತದೆ. ಕೊಡಗು ಜಾನಪದ ಪರಿಷತ್ ಘಟಕದ ಶಿಫಾರಸ್ಸಿನ ಮೇರೆಗೆ ಈ ಪ್ರಶಸ್ತಿ ನೀಡಲಾಗಿದ್ದು, ಈಗಾಗಲೇ ಜಿಲ್ಲೆಯಿಂದ ಬಾಚರಣಿಯಂಡ ಅಪ್ಪಣ್ಣ, ಬೈತಡ್ಕ ಜಾನಕಿ, ಬೊಟ್ಟೋಳಂಡ ಕಾಶಿ ಅಚ್ಚಯ್ಯ ಅವರುಗಳಿಗೆ ಈ ಗೌರವ ಲಭಿಸಿದೆ.