ಮಡಿಕೇರಿ, ಫೆ. 13: ರಸ್ತೆ ಸಂಚಾರ ಸುರಕ್ಷತಾ ಕ್ರಮಗಳೊಂದಿಗೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಶಾಲಾ ಮಕ್ಕಳ ಹಂತದಲ್ಲಿ ಸಾವು - ನೋವು ನಿಯಂತ್ರಿಸಲು, ಶಾಲಾ ಮಕ್ಕಳ ಪೋಷಕರೊಂದಿಗೆ ಶಿಕ್ಷಕರ ಸಹಿತ, ಸಾರಿಗೆ, ಪೊಲೀಸ್, ಶಿಕ್ಷಣ ಇಲಾಖೆಗಳು ಜಂಟಿಯಾಗಿ ಹೊಣೆಗಾರಿಕೆ ನಿಭಾಯಿಸಲು ಕ್ರಮ ಕೈಗೊಳ್ಳಲಾಗಿದೆ. ಈ ದಿಸೆಯಲ್ಲಿ ಇಂದು ನಗರದ ಕ್ರಿಸ್ಟಲ್ ಹಾಲ್ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕೊಡಗು ಪೊಲೀಸ್ ಇಲಾಖೆ ಹಾಗೂ ಟ್ರಾವಲರ್ಸ್ ಕೂರ್ಗ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಜಾಗೃತಿ ಸಂಬಂಧ ಮಾಹಿತಿ ಶಿಬಿರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ರಸ್ತೆ ಸುರಕ್ಷಾ ನಿಯಮ ಪಾಲಿಸುವಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ಎಲ್ಲಾ ವಾಹನಗಳ ಮಾಲೀಕರು ಮತ್ತು ಚಾಲಕರು ಕಡ್ಡಾಯ ಗಮನಹರಿಸಲು ಸೂಚಿಸಿದರು.

ಅಲ್ಲದೆ ಶಾಲಾ ಹಂತದಲ್ಲಿ ಮಕ್ಕಳ ಪೋಷಕರನ್ನು ಒಳಗೊಂಡು ರಚಿಸಲಾಗಿರುವ ಸುರಕ್ಷಾ ಸಮಿತಿಗಳು ಆಗಿಂದಾಗ್ಗೆ ಸಮಾಲೋಚನೆಯೊಂದಿಗೆ, ತಮ್ಮ ತಮ್ಮ ಶಾಲೆಗಳ ವಾಹನಗಳ ಸಹಿತ, ಇತರ ವಾಹನಗಳಲ್ಲಿ ಮಕ್ಕಳನ್ನು ಕರೆತರುವವರ ಬಗ್ಗೆ ನಿಗಾವಹಿಸಬೇಕೆಂದು ತಿಳಿಹೇಳಿದರು.

ಸಮಿತಿ ಹೊಣೆಗಾರಿಕೆ : ಕರ್ನಾಟಕ ರಸ್ತೆ ಸುರಕ್ಷಾ ಕಾಯ್ದೆ 2012ರ ನಿಯಮದಂತೆ ಮತ್ತು ಕೇಂದ್ರದಿಂದ 2016ರ ತಿದ್ದುಪಡಿ ಕಾಯ್ದೆ ಒಳಗೊಂಡಂತೆ; ಶಾಲಾ ಹಂತದ ಸುರಕ್ಷಾ ಸಮಿತಿಯು ಅನುಸರಿಸಬೇಕಾದ ಮಾರ್ಗಸೂಚಿ ಬಗ್ಗೆ ಈ ಸಂದರ್ಭ ತಿಳಿಯಪಡಿಸಲಾಯಿತು.

ಶಾಲೆಗಳಿಗೆ ಮಕ್ಕಳನ್ನು ಕರೆತರುವ ವಾಹನಗಳ ಸುಸ್ಥಿತಿಯ ಬಗ್ಗೆ ಆಗಿಂದಾಗ್ಗೆ ಖಚಿತಪಡಿಸಿಕೊಳ್ಳುವದು; ಮಕ್ಕಳಿಗೆ ಕನಿಷ್ಟ ಪ್ರಯಾಣ ದರ, ನಿರ್ದಿಷ್ಟ ಸ್ಥಳಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಮಕ್ಕಳನ್ನು ಹತ್ತಿಸಿಕೊಳ್ಳುವದು; ಇಳಿಸುವ ನಿಟ್ಟಿನಲ್ಲಿ ಆದ್ಯತೆ ಮೇರೆಗೆ ಗಮನಹರಿಸುವದು; ವಾಹನ ಚಾಲಕ ಅಥವಾ ಮಾಲೀಕ ಯಾವದೇ ದುಶ್ಚಟಗಳಿಗೆ ಒಳಗಾಗದೆ ಮತ್ತು ಮದ್ಯಸೇವನೆ, ಮೊಬೈಲ್‍ನಲ್ಲಿ ಸಂಭಾಷಣೆಯೊಂದಿಗೆ ವಾಹನ ಚಾಲಿಸದಂತೆ ಕ್ರಮ ವಹಿಸುವದು ಸಮಿತಿಯ ಮುಖ್ಯ ಕರ್ತವ್ಯವಾಗಿದೆ.

ಇನ್ನು ಸಂಬಂಧಿಸಿದ ಶಾಲಾ ವಾಹನ, ಆಟೋರಿಕ್ಷಾ, ಇನ್ನಿತರ ವಾಹನಗಳಲ್ಲಿ ನಿಗದಿಗೊಳಿಸಿರುವ ಸಾಮಥ್ರ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯದಂತೆಯೂ, ಯಾವದೇ ಸರಕು ಇತ್ಯಾದಿ ಸಾಗಾಟಕ್ಕೆ ಅವಕಾಶ ಕಲ್ಪಿಸದಂತೆಯೂ ನಿಯಮವನ್ನು ವಿಧಿಸಲಾಗಿದೆ. ಈ ಸಂಗತಿಗಳನ್ನು ಸಮಿತಿಯು ಗಮನಿಸಬೇಕಿದೆ.

ಒಂದು ವೇಳೆ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನ ಅಪಘಾತ, ದುರಸ್ಥಿಗೆ ಒಳಗಾದರೆ ಸಕಾಲದಲ್ಲಿ ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಆಯಾ ಸಂಸ್ಥೆಯ ಶಿಕ್ಷಕರ ಸುಪರ್ದಿಗೆ ವಹಿಸಿ, ಪೋಷಕರಿಗೆ ಸುದ್ದಿ ಮುಟ್ಟಿಸಿ ಆ ಮೂಲಕ ಮನೆಗಳಿಗೆ ಕರೆದೊಯ್ಯಲು ಗಮನ ನೀಡಬೇಕಿದೆ.

ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಮಾತನಾಡಿ ಅಪಘಾತವನ್ನು ತಪ್ಪಿಸುವಲ್ಲಿ ರಸ್ತೆ ಸುರಕ್ಷತೆ ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾಗಬೇಕು ಎಂದು ಸಲಹೆ ಮಾಡಿದರು.

ಮಕ್ಕಳು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಮರಳುವ ಸಂದರ್ಭದಲ್ಲಿ ಹೆಚ್ಚಿನ ನಿಗಾವಹಿಸಬೇಕು ಎಂದು ಅವರು ತಿಳಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಸೌಂದರ್ಯ ಮಾತನಾಡಿ ರಸ್ತೆ ಸುರಕ್ಷತೆ ಮತ್ತು ನಿಯಮಗಳ ಬಗ್ಗೆ ವಾಹನ ಚಾಲಕರಲ್ಲಿ ಮಾಹಿತಿ ಇರಬೇಕು. ವಾಹನ ಚಾಲನಾ ಪರವಾನಗಿ, ವಾಹನ ದಾಖಲೆಗಳು ಕಡ್ಡಾಯವಾಗಿ ಇರಬೇಕು ಎಂದು ಹೇಳಿದರು.

ಪೊಲೀಸ್ ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ ಮಾತನಾಡಿ ಶಾಲಾ ವಾಹನ ರಹದಾರಿ ಪಡೆದಿದೆಯೇ ಇಲ್ಲವೆ ಎಂಬದನ್ನು ಗಮನಿಸಬೇಕು, ವಾಹನವು ಎಲ್ಲಿಂದ ಎಲ್ಲಿಯವರೆಗೆ ಸಂಚಾರ ಮಾಡಲಾಗುತ್ತಿದೆ ಎಂಬ ಮಾಹಿತಿ, ಶಾಲೆಯ ಹೆಸರು, ಮತ್ತಿತರ ಮಾಹಿತಿ ಒಳಗೊಂಡಿರಬೇಕು ಎಂದರು.

ಈ ವರ್ಷ ರಸ್ತೆ ಅಪಘಾತದಲ್ಲಿ ಮಡಿಕೇರಿ ತಾಲೂಕಿನಲ್ಲಿ 2, ವೀರಾಜಪೇಟೆ ತಾಲೂಕಿನಲ್ಲಿ 3, ಸೋಮವಾರಪೇಟೆ ತಾಲೂಕಿನಲ್ಲಿ 6 ಸಾವು ಸಂಭವಿಸಿದೆ ಎಂದು ಅವರು ಮಾಹಿತಿ ನೀಡಿದರು.

ಟ್ರಾವಲ್ ಕೂರ್ಗ್ ಸಂಸ್ಥೆಯ ಸತ್ಯ ಮಾತನಾಡಿದರು. 30ನೇ ರಾಷ್ಟೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಣೆಯನ್ನು ಮಾಡಲಾಯಿತು.

ಕೆಎಸ್‍ಆರ್‍ಟಿಸಿ ಮಡಿಕೇರಿ ಡಿಪೋ ವ್ಯವಸ್ಥಾಪಕಿ ಗೀತಾ, ಸಾರ್ವಜನಿಕರು ವಾಹನ ಚಾಲಕರು ಮತ್ತು ಮಾಲೀಕರು, ವಾಹನ ಚಾಲಕ ಸಂಘದ ಅಧ್ಯಕ್ಷರು, ಇತರರು ಇದ್ದರು. ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಚೇತನ್ ನಿರೂಪಿಸಿ ವಂದಿಸಿದರು.