ಗೋಣಿಕೊಪ್ಪ ವರದಿ, ಫೆ. 12: ಆಂಧ್ರಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್‍ನಲ್ಲಿ ಕೊಡಗು ತಂಡ ಒಟ್ಟು 16 ಪದಕ ಗೆದ್ದುಕೊಂಡು ಯಶಸ್ವಿ ಸಾಧನೆ ಮಾಡಿದೆ. ಮಾಸ್ಟರ್ಸ್ ಏಷಿಯನ್ ಗೇಮ್ಸ್‍ಗೆ 6 ಮಂದಿ ಆಟಗಾರರು ಆಯ್ಕೆಯಾದರು.
ಕೊಡಗು ತಂಡದ 6 ಮಂದಿ ಕ್ರೀಡಾಪಟುಗಳಾದ ಬೊಪ್ಪಂಡ ಕುಸುಮ ಭೀಮಯ್ಯ, ಚೇಮೀರ ಸೀತಮ್ಮ, ಕಮಲಮ್ಮ, ಮುಲ್ಲೇರ ಪೊನ್ನಮ್ಮ, ಪೆಮ್ಮಂಡ ಅಪ್ಪಯ್ಯ, ಮಾರಮಾಡ ಮಾಚಮ್ಮ ಹಾಗೂ ಆಮೆಮನೆ ಜನಾರ್ಧನ ಇವರುಗಳು ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಮಾಸ್ಟರ್ಸ್ ಏಷಿಯನ್ ಗೇಮ್ಸ್ ಟೂರ್ನಿಗೆ ಆಯ್ಕೆಯಾದರು.
5 ದಿನ ನಡೆದ ಟೂರ್ನಿಯಲ್ಲಿ ಕೊಡಗು ತಂಡ ಉತ್ತಮ ಸಾಧನೆ ಮಾಡಿತು. ಟೂರ್ನಿಯ ಕೊನೆಯ ದಿನ 9 ಪದಕ ಗೆದ್ದು ಗೆಲುವಿನ ಓಟವನ್ನು ಮುಂದುವರಿಸಿ ಹೆಚ್ಚು ಪದಕ ಗೆದ್ದರು. ಭಾನುವಾರ ತೆರೆಕಂಡ ರಾಷ್ಟ್ರೀಯ ಟೂರ್ನಿಯಲ್ಲಿ ಕೊಡಗು ತಂಡ 6 ಚಿನ್ನ, 9 ಬೆಳ್ಳಿ, 1 ಕಂಚಿನ ಪದಕದ ಮೂಲಕ ಒಟ್ಟು 16 ಪದಕ ಗೆದ್ದುಕೊಂಡಿತು.