ಕೂಡಿಗೆ, ಫೆ. 10: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿಯಲ್ಲಿ ಸಂಗ್ರಹವಾಗಿರುವ ನೀರನ್ನು ಬೇಸಿಗೆ ಬೆಳೆಗೆ ಗಡಿಭಾಗ ಶಿರಂಗಾಲದವರೆಗೆ ಹರಿಸಬೇಕು ಎಂದು ಈ ಭಾಗದ ರೈತರ ಆಗ್ರಹವಾಗಿದೆ.

ಮಳೆಗಾಲದ ಸಂದರ್ಭ ಸಂಭವಿಸಿದ ಪ್ರಕೃತಿ ವಿಕೋಪದಿಂದ ಬೆಳೆಯು ಸಮಪರ್ಕವಾಗಿ ಬಾರದೆ ಮಳೆಗೆ ಬೆಳೆಗಳು ಆಹುತಿಯಾಗಿದೆ. ಅಲ್ಲದೆ, ಈ ಭಾಗದಲ್ಲಿ ಹಾರಂಗಿ ಅಚ್ಚುಕಟ್ಟು ಪ್ರದೇಶಗಳಾದ ಹೆಬ್ಬಾಲೆ, ತೊರೆನೂರು, ಶಿರಂಗಾಲ, ಮಲ್ಲೇನಹಳ್ಳಿ, ಹುದುಗೂರು, ಮದಲಾಪುರ ವ್ಯಾಪ್ತಿಗಳಲ್ಲಿ ಭತ್ತವು ಜಳ್ಳು ಮಿಶ್ರಿತವಾಗಿ ರೈತರು ನಷ್ಟವನ್ನು ಅನುಭವಿಸಿದ್ದಾರೆ. ಈಗಾಗಲೇ ಹಾರಂಗಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹವಾಗಿರುವದರಿಂದ ಹೂಳು ತೆಗೆಯುವ ನೆಪ ಹೇಳಿ ನದಿಗೆ ನೀರು ಹರಿಸುವ ಬದಲು ಹಾರಂಗಿಯ ಎಡದಂಡೆ ನಾಲೆಯ ಮೂಲಕ ನೀರನ್ನು ಹರಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ, ಶಿರಂಗಾಲ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ್, ಹೆಬ್ಬಾಲೆಯ ಪರಮೇಶ್, ಕೂಡಿಗೆ ಗ್ರಾ.ಪಂ. ಸದಸ್ಯರಾದ ಟಿ.ಕೆ. ವಿಶ್ವನಾಥ್, ಮಂಜಯ್ಯ, ಮದಲಾಪುರದ ನಾರಾಯಣ ಸೇರಿದಂತೆ ಈ ವ್ಯಾಪ್ತಿಯ ರೈತರು ಆಗ್ರಹಿಸಿದ್ದಾರೆ.

ಈಗಾಗಲೇ ನೀರು ಬಳಕೆದಾರರ ಸಂಘದ ಮಾಸಿಕ ಸಭೆಯಲ್ಲಿ ಒಕ್ಕೊರಲಿನ ತೀರ್ಮಾನದಂತೆ ಗಡಿಭಾಗ ಶಿರಂಗಾಲದವರೆಗೆ ನೀರನ್ನು ಹರಿಸಲು ಒತ್ತಾಯದ ಮನವಿ ಪತ್ರವನ್ನು ಕಾವೇರಿ ನೀರಾವರಿ ಇಲಾಖೆಯ ಅಧಿಕಾರಿ ಗಳಿಗೆ ಸಲ್ಲಿಸಲಾಗಿದೆ. ಅಲ್ಲದೆ, ಶಿರಂಗಾಲದ ಗಡಿಭಾಗದಲ್ಲಿ ಮುಖ್ಯ ನಾಲೆಗೆ ಅಡ್ಡಲಾಗಿ ಕಟ್ಟೆ ನಿರ್ಮಾಣ ಮಾಡಿ ನಾಲೆಗೆ ಗೇಟ್ ಅಳವಡಿಸ ಲಾಗಿದೆ. ಗೇಟ್ ಅಳವಡಿಸಿರುವ ಉದ್ದೇಶವೆಂದರೆ, ಅಣೆಕಟ್ಟೆಯ ನೀರನ್ನು ಕೊಡಗಿನ ರೈತರಿಗೆ ಬೇಸಿಗೆ ಬೆಳೆಗೆ(ಕಾರೆಫ್) ಒದಗಿಸಲು ನಿರ್ಮಾಣ ಮಾಡಲಾಗಿದೆ. ಆದ್ದರಿಂದ ಈ ಸಾಲಿನಲ್ಲಿ ರೈತರಿಗೆ ಆಗಿರುವ ನಷ್ಟವನ್ನು ಭರಿಸಿಕೊಳ್ಳಲು ಅನುಕೂಲವಾಗುವಂತೆ ಈಗಾಗಲೇ ರೈತರು ತಮ್ಮ ಜಮೀನುಗಳನ್ನು ಹದಗೊಳಿಸುತ್ತಿದ್ದಾರೆ. ಬೇಸಿಗೆ ಬೆಳೆಗಳಾದ ಹಲಸಂದೆ, ತರಕಾರಿ, ರಾಗಿ ಇನ್ನಿತರ ಬೆಳೆ ಬೆಳೆಯಲು ಅಲ್ಪಾವಧಿಯ ನೀರಿನ ಅವಶ್ಯಕತೆ ಇರುವದರಿಂದ ಹಾಗೂ ದನ-ಕರುಗಳಿಗೆ ಕುಡಿಯಲು ನೀರಿನ ಅಗತ್ಯಕ್ಕಾಗಿ ತಿಂಗಳಲ್ಲಿ 15 ದಿನಗಳವರೆಗೆ ನೀರನ್ನು ಹರಿಸುವ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ನೀರನ್ನು ಒದಗಿಸಲು ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.