ಕುಶಾಲನಗರ, ಫೆ. 10: ಜಿಲ್ಲೆಯ ವಿವಿಧೆಡೆ ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿ ಬಡಾವಣೆಗಳ ತ್ಯಾಜ್ಯಗಳು ನೇರವಾಗಿ ನದಿಗೆ ಹರಿಸುವದನ್ನು ತಪ್ಪಿಸಲು ತಕ್ಷಣ ಕಾರ್ಯಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರು ಮನವಿ ಸಲ್ಲಿಸಿದರು.

ಕೊಡಗು ಜಿಲ್ಲೆಯ ಕುಶಾಲನಗರ ಸೇರಿದಂತೆ ಭಾಗಮಂಡಲದಿಂದ ಶಿರಂಗಾಲ ತನಕ 23 ಪಂಚಾಯಿತಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಮತ್ತು ಕಲುಷಿತ ನೀರು ನೇರವಾಗಿ ನದಿ ಒಡಲು ಸೇರುತ್ತಿದೆ. ಪಟ್ಟಣದಲ್ಲಿ ನಿರ್ಮಾಣವಾಗಿರುವ ಒಳಚರಂಡಿ ಯೋಜನೆ ಕಾಮಗಾರಿ ಅಪೂರ್ಣಗೊಂಡಿದ್ದು ಕಾಮಗಾರಿ ಕೂಡಲೇ ಪ್ರಾರಂಭಿಸಬೇಕು ಎಂದು ಮನವಿ ಪತ್ರದಲ್ಲಿ ಕೋರಿದ್ದಾರೆ.

ಕುಶಾಲನಗರ ಪಟ್ಟಣದಲ್ಲಿ ಕಳೆದ 4 ವರ್ಷಗಳಿಂದ ಒಳಚರಂಡಿ ಯೋಜನೆ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ಕಾಮಗಾರಿ ಕೂಡ ಕಳಪೆ ಮಟ್ಟದ್ದಾಗಿದೆ ಎಂದು ಆರೋಪಿಸಿರುವ ಸಮಿತಿ ಪ್ರಮುಖರು, ಈ ಬಗ್ಗೆ ಪರಿಶೀಲನೆ ನಡೆಸಿ ಸ್ವಚ್ಛ ಕಾವೇರಿ ನಿರ್ಮಾಣಕ್ಕೆ ಒತ್ತು ನೀಡುವಂತೆ ಕೋರಿದ್ದಾರೆ.

ಈ ಸಂದರ್ಭ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಪ್ರತಿಕ್ರಿಯಿಸಿ, ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಪ್ರಮುಖರಾದ ಮಂಡೇಪಂಡ ಬೋಸ್ ಮೊಣ್ಣಪ್ಪ, ಕೆ.ಆರ್. ಶಿವಾನಂದನ್, ಡಿ.ಆರ್. ಸೋಮಶೇಖರ್, ಹೆಚ್.ಜಿ. ಜಗದೀಶ್ ಇದ್ದರು.