ಶನಿವಾರಸಂತೆ, ಫೆ. 9: ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆಗೆಂದು ಯುವಕನೋರ್ವ ಪಕ್ಕದ ಮನೆ ಯುವತಿಯೊಂದಿಗೆ ಸ್ಕೂಟರ್ (ಕೆಎ-01-ಇಝಡ್-7265)ನಲ್ಲಿ ಬರುತ್ತಿದ್ದಾಗ ಟ್ರ್ಯಾಕ್ಟರ್ (ಕೆಎ-37, ಐ-3771) ಡಿಕ್ಕಿಯಾಗಿ ಯುವಕ ಸ್ಥಳದಲ್ಲೇ ಮೃತಪಟ್ಟು ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ದುಂಡಳ್ಳಿ ಗ್ರಾಮದ ಅರಣ್ಯ ಇಲಾಖೆ ಕಚೇರಿ ಮುಂಭಾಗ ಶುಕ್ರವಾರ ರಾತ್ರಿ ನಡೆದಿದೆ.ಕಾಜೂರು ಗ್ರಾಮದ ಚೇತನ್ (30) ಮೃತಪಟ್ಟ ಯುವತಿ ಭೂಮಿಕಾ (20) ಗಾಯಗೊಂಡ ಯುವತಿ ಜಲ್ಲಿ ತುಂಬಿಸಿದ್ದ (ಮೊದಲ ಪುಟದಿಂದ) ಟ್ರ್ಯಾಕ್ಟರ್ ಸ್ಕೂಟರ್‍ಗೆ ಡಿಕ್ಕಿಯಾದ ಪರಿಣಾಮ ಚೇತನ್ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಭಾಗದಲ್ಲಿ ಕುಳಿತಿದ್ದ ಭೂಮಿಕಾ ಗಂಭೀರವಾಗಿ ಗಾಯಗೊಂಡಿದ್ದು, ಶನಿವಾರಸಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾದ್ರೆ ಗ್ರಾಮದ ವಿಶ್ವನಾಥ್ ಅವರಿಗೆ ಸೇರಿದ ಟ್ರ್ಯಾಕ್ಟರ್‍ನ ಚಾಲಕ ಹರೀಶ್ ಪರಾರಿಯಾಗಿದ್ದಾನೆ. ಟ್ರ್ಯಾಕ್ಟರ್ ಅನ್ನು ಪೊಲೀಸರು ಮಾದ್ರೆ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ.

ಮೃತನ ಸಂಬಂಧಿ ಬಿ.ವಿ. ಚಂದ್ರು ದೂರು ನೀಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.