ಸೋಮವಾರಪೇಟೆ, ಫೆ. 9: ನಾಯಕತ್ವದ ಗುಣಗಳೊಂದಿಗೆ ಸಮಾಜಮುಖಿ ವ್ಯಕ್ತಿಯಾಗಿ ರೂಪುಗೊಳ್ಳಲು ಜೇಸೀ ಸಂಸ್ಥೆ ಸಹಕಾರಿಯಾಗಿದೆ ಎಂದು ಜೇಸಿ ವಲಯಾಧ್ಯಕ್ಷ ಜೆಫಿನ್ ಜಾಯ್ ಹೇಳಿದರು.

ಇಲ್ಲಿನ ಮಾನಸ ಸಭಾಂಗಣದಲ್ಲಿ ನಡೆದ ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜೇಸೀ ಸಂಸ್ಥೆಯಲ್ಲಿ ಕಲಿಯಲು, ಬೆಳೆಯಲು ಮುಕ್ತ ಅವಕಾಶವಿದೆ. ಸದಸ್ಯರುಗಳು ಸಂಸ್ಥೆಯು ಆಯೋಜಿಸುವ ತರಬೇತಿ ಕಾರ್ಯಾ ಗಾರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಜನಪರ ಸೇವೆಗೆ ಮುಂದಾದರೆ, ಸಮಾಜದಲ್ಲಿ ಓರ್ವ ಉತ್ತಮ ಪ್ರಜೆಯಾಗಿ ಗುರುತಿಸಿಕೊಳ್ಳಲು ಸಾಧ್ಯವಿದೆ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರೋಟರಿ ಹಿಲ್ಸ್ ಸೋಮವಾರಪೇಟೆ ಸಂಸ್ಥೆಯ ಅಧ್ಯಕ್ಷ ಪಿ.ಕೆ. ರವಿ ಮಾತನಾಡಿ, ಯುವ ಜನಾಂಗದಲ್ಲಿ ನಾಯಕತ್ವ ಗುಣಗಳನ್ನು ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ತರಬೇತಿಗಳನ್ನು ನೀಡುವ ಜೇಸೀ ಸಂಸ್ಥೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುತ್ತಿರುವದು ಶ್ಲಾಘನೀಯ ಎಂದರು.

ನಿಕಟಪೂರ್ವ ವಲಯ ಕಾರ್ಯದರ್ಶಿ ಡಾ. ಎಂ. ಶಿವಕುಮಾರ್ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಲ್ಲಿಯೂ ಅಖಂಡ ಜ್ಞಾನವಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳುವದರೊಂದಿಗೆ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಲು ಸಾಧ್ಯ ಎಂದರು.

ವಲಯ ಉಪಾಧ್ಯಕ್ಷ ಕೆ. ಪ್ರವೀಣ್‍ರವರು ನೂತನ ಆಡಳಿತ ಮಂಡಳಿಯವರಿಗೆ ಪ್ರಮಾಣ ವಚನ ಬೋಧಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾಗಿದ್ದ ಕೆ.ಎ. ಪ್ರಕಾಶ್‍ರವರು ನೂತನ ಅಧ್ಯಕ್ಷ ಬಿ.ಜಿ. ಪುರುಷೋತ್ತಮ್‍ರವರಿಗೆ ಹಾಗೂ ಜೇಸಿರೇಟ್ಸ್‍ನ ಅಧ್ಯಕ್ಷರಾಗಿದ್ದ ಮಹೇಶ್ವರಿ ಗಿರೀಶ್‍ರವರು ನೂತನ ಅಧ್ಯಕ್ಷೆ ಸುಮಲತಾ ಪುರುಷೋತ್ತಮ್‍ರವರಿಗೆ ಅಧಿಕಾರ ಹಸ್ತಾಂತರಿಸಿದರು.

ವೇದಿಕೆಯಲ್ಲಿ ಕಾರ್ಯದರ್ಶಿ ಉಷಾರಾಣಿ ಗುರುಪ್ರಸಾದ್, ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಮನೋಹರ್, ಕಾರ್ಯದರ್ಶಿ ಎಂ.ಎ. ರುಬಿನಾ ಅವರುಗಳು ಉಪಸ್ಥಿತರಿದ್ದರು.