ಸಿದ್ದು ಸೋತಿದ್ದಕ್ಕೆ ಕೊಡಗಿನಲ್ಲಿ ಪ್ರಳಯ! ಮೈಸೂರು, ಫೆ. 9: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸೋಲಿಸಿದ್ದರ ಪರಿಣಾಮ ಕೊಡಗಿನಲ್ಲಿ ಜಲಪ್ರಳಯವಾಗಿದೆ ಎಂದು ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು ಹೇಳಿದ್ದಾರೆ. ಮೈಸೂರಿನಲ್ಲಿ ಕನಕ ಭವನ ಉದ್ಘಾಟನೆ ವೇಳೆ ಮಾತನಾಡಿದ ಅವರು, ಹಾಲುಮತ ಸಮಾಜದ ನಾಯಕರು ಸಮಾಜದ ಅಭಿವೃದ್ಧಿ, ಏಳಿಗೆಗಾಗಿ ದುಡಿದರು. ಅವರಿಗೆ ಅನ್ಯಾಯವಾದ ಸಂದರ್ಭದಲ್ಲಿ ಪ್ರಕೃತಿ ಮುನಿಸಿಕೊಂಡು ತನ್ನ ಆರ್ಭಟ ಪ್ರದರ್ಶಿಸಿತ್ತು ಎಂದರು. ಈ ವಿಷಯವನ್ನು ಅಂದೆ ನಾನು ಹೇಳಬೇಕೆಂದುಕೊಂಡಿದ್ದೆ ಆದರೆ ಆಗ ನನಗೆ ಸೂಕ್ತ ವೇದಿಕೆ ಸಿಕ್ಕಿರಲಿಲ್ಲ. ಇಂದು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ಹೀಗಾಗಿ ಸಿದ್ದರಾಮಯ್ಯ ಸೇರಿ ನಮ್ಮ ಸಮಾಜದ ಯಾವದೇ ನಾಯಕರ ಬಗ್ಗೆ ಹೀನಾಯವಾಗಿ ಮಾತನಾಡಬಾರದು ಎಂದು ಸ್ವಾಮೀಜಿಗಳು ಸಿದ್ದರಾಮಯ್ಯ ವಿರೋಧಿಗಳಿಗೆ ಸಂದೇಶ ರವಾನಿಸಿದ್ದಾರೆ.
ಸೈನಿಕರಿಗೆ ಬಂತು ಡೆಡ್ಲಿ ಸ್ನೈಪರ್ ರೈಫಲ್
ನವದೆಹಲಿ, ಫೆ. 9: ಪಾಕಿಸ್ತಾನ ಸೈನಿಕರ ಮತ್ತು ಅಲ್ಲಿನ ಉಗ್ರರ ಸ್ನೈಪರ್ ರೈಫಲ್ ಗಳಿಗೆ ಬಲಿಯಾಗುತ್ತಿದ್ದ ಭಾರತೀಯ ಸೈನಿಕರ ಬಹು ದಿನಗಳ ಆಸೆ ಕೊನೆಗೂ ಈಡೇರಿದ್ದು, ಇದೀಗ ಭಾರತೀಯ ಸೈನಿಕರ ಕೈಗೂ ಅತ್ಯಾಧುನಿಕ ಡೆಡ್ಲಿ ಸ್ನೈಪರ್ ರೈಫಲ್ಗಳು ಬಂದಿವೆ. ಪಾಕ್ ಮೂಲದ ನುಸುಳುಕೋರ ಉಗ್ರರನ್ನು ಮತ್ತು ಅಪ್ರಚೋದಿತ ದಾಳಿ ಮಾಡುವ ಪಾಕ್ ಸೈನಿಕರ ಮಟ್ಟಹಾಕಲು ಅನುಕೂಲವಾಗುವಂತೆ ಅತ್ಯಾಧುನಿಕ ಸ್ನೈಪರ್ ರೈಫಲ್ಗಳ ಬಳಕೆಯನ್ನು ಭಾರತೀಯ ಸೇನೆ ಆರಂಭಿಸಿದೆ. ಇದಕ್ಕಾಗಿ ಭಾರತ ಬೆರೆಟ್ಟಾ ಸಂಸ್ಛೆಯ 0.338 ಲಪುವಾ ಮ್ಯಾಗ್ನಮ್ ಸ್ಕಾರ್ಪಿಯೋ ಟಿಜಿಟಿ ಸೂಪರ್ ಸ್ನೈಪರ್ ರೈಫಲ್ ಮತ್ತು ಬರೆಟ್ಟ್ ಸಂಸ್ಥೆಯ 0.50 ಕ್ಯಾಲಿಬರ್ ಎಂ95 ಸ್ನೈಪರ್ ರೈಫಲ್ ಗಳನ್ನು ಖರೀದಿ ಮಾಡಿದೆ. ಮೂಲಗಳ ಪ್ರಕಾರ ಈ ಎರಡೂ ಮಾದರಿ ಒಟ್ಟು 5,719 ಸೂಪರ್ ಸ್ಪೈಪರ್ ರೈಫಲ್ ಗಳನ್ನು ಭಾರತ ಖರೀದಿ ಮಾಡಿದ್ದು, ಈಗಾಗಲೇ ಪಾಕಿಸ್ತಾನ ಮತ್ತು ಭಾರತ ಗಡಿ ಪ್ರದೇಶವಾಗಿರುವ ಎಲ್ ಒಸಿ (ಗಡಿ ನಿಯಂತ್ರಣ ರೇಖೆ)ಯಲ್ಲಿರುವ ಸೈನಿಕರಿಗೆ ನೀಡಲಾಗಿದೆ ಎಂದು ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಮಾಹಿತಿ ನೀಡಿದ್ದಾರೆ.
ರಾಜಕೀಯ ನಿವೃತ್ತಿಯ ಮಾತನಾಡಿದ ಸಿಎಂ
ಬೆಂಗಳೂರು, ಫೆ. 9: ಬಿಜೆಪಿ ನಾಯಕರು ನಮ್ಮ ಶಾಸಕರಿಗೆ ಆಮಿಷ ಒಡ್ಡುತ್ತಿರುವದಕ್ಕೆ ಸಂಬಂಧಿಸಿದಂತೆ ನಾನು ಬಿಡುಗಡೆ ಮಾಡಿರುವ ಆಡಿಯೋ ನಕಲಿ ಎಂದು ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಶನಿವಾರ ಮತ್ತೆ ಪ್ರಮಾಣ ಮಾಡಿದ್ದಾರೆ. ಇಂದು ಧರ್ಮಸ್ಥಳದಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬಜೆಟ್ ಗೂ ಮುನ್ನ ಬಿಡುಗಡೆ ಮಾಡಿದ್ದ ಆಡಿಯೋದಲ್ಲಿರೋದು ಬಿಎಸ್ ಯಡಿಯೂರಪ್ಪ ಅವರ ಧ್ವನಿಯೇ ಆಗಿದೆ. ಒಂದು ವೇಳೆ ಈ ವಿಚಾರ ಸಾಬೀತಾಗದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಶಪಥ ಮಾಡಿದರು.