ಗೋಣಿಕೊಪ್ಪ ವರದಿ, ಫೆ. 8: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ ಮತ್ತು ನವದೆಹಲಿ ಸಸ್ಯ ತಳಿ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ ಸಹಯೋಗದಲ್ಲಿ ಸಸ್ಯ ತಳಿ ರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆ ನೋಂದಣಿಯನ್ನು ಪ್ರಾರಂಭಿಸಲಾಗಿದೆ.
ಕಾಯ್ದೆಯ ಮೂಲ ಉದ್ದೇಶವಾದ ಕೃಷಿಕರ ಸಸ್ಯ ತಳಿಗಳನ್ನು ರಕ್ಷಣೆ ಮಾಡುವದು, ತಳಿ ವಿಜ್ಞಾನಿಗಳ, ರೈತರ ಬೀಜೋದ್ಯಮಗಳ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವದು, ದೇಶದ ಕೃಷಿ ಅಭಿವೃದ್ಧಿಯನ್ನು ಉತ್ತಮಗೊಳಿಸುವ ಸಲುವಾಗಿ ನೋಂದಣಿಗೆ ಅವಕಾಶ ನೀಡಿದೆ.ಜಿಲ್ಲೆಯ ರೈತರು ಭತ್ತ, ಕಾಳುಮೆಣಸು, ಏಲಕ್ಕಿ, ಶುಂಠಿ, ಬಾಳೆ, ಟೊಮೇಟೋ, ಬದನೆ, ಬೆಂಡೆಕಾಯಿ, ಹೂಕೋಸು, ಎಲೆಕೋಸು, ಆಲುಗೆಡ್ಡೆ, ಮುಸುಕಿನ ಜೋಳ, ಈರುಳ್ಳಿ, ಬೆಳ್ಳುಳ್ಳಿ, ಅರಿಸಿನ, ಗುಲಾಬಿ, ಸೇವಂತಿಗೆ, ಆರ್ಕಿಡ್, ಮಾವು, ತೆಂಗು ಮತ್ತು ಔಷದೀಯ ಗಿಡಗಳ ಬೆಳೆಗಳಲ್ಲಿ ರೈತರಿಂದ ಸಂರಕ್ಷಿಸಲ್ಪಟ್ಟ ತಳಿಗಳಿದ್ದಲ್ಲಿ ಅಂತಹ ತಳಿಗಳನ್ನು ಮೂಲ ರೈತ, ರೈತ ಸಮುದಾಯದ ಹೆಸರಿನಲ್ಲಿ ನೋಂದಣಿ ಮಾಡಿಸಲಾಗುವದು. ರೈತರಿಗೆ ರಾಷ್ಟ್ರದ ಸಸ್ಯದ ತಳಿ ಸಂಪನ್ಮೂಲಗಳ ಮೇಲಿರುವ ಹಕ್ಕುಗಳನ್ನು ಮಾನ್ಯ ಮಾಡುವದಲ್ಲದೆ, ತಳಿಯ ಬಿತ್ತನೆ ಬೀಜದ ಉತ್ಪಾದನೆ ಮತ್ತು ಬಳಕೆಯಲ್ಲಿ ಅವರಿಗಿರುವ ಹಕ್ಕುಗಳನ್ನು ಅನುಭವಿಸುವ ಅವಕಾಶ ಕಲ್ಪಿಸುವದು ಹಾಗೂ ಪ್ರಾಚೀನ ತಳಿ ಅಭಿವೃದ್ಧಿಪಡಿಸಿ, ಸಂಗ್ರಹಿಸಿ, ಸಂರಕ್ಷಿಸಿಕೊಂಡು ಬಂದಿರುವವರನ್ನು ಗುರುತಿಸಿ ಅವರಿಗೆ ಮಾಲೀಕತ್ವ ಹಾಗೂ ಪ್ರಶಸ್ತಿ ನೀಡುವದು ಮತ್ತು ಅದನ್ನು ಮುಂದೆ ಬಳಸಿಕೊಳ್ಳುವ ಸಂಸ್ಥೆಗಳ ಲಾಭದ ಪಾಲುಸಿಗುವಂತೆ ಮಾಡುವ ಅವಕಾಶ ಇಲ್ಲಿದೆ.ಜಿಲ್ಲೆಯ ರೈತರು ತಲತಲಾಂತರಗಳಿಂದ ಯಾವದೇ ಬೆಳೆಗಳ ತಳಿಗಳನ್ನು ಸಾಂಪ್ರದಾಯಕವಾಗಿ ಸಂರಕ್ಷಿಸಿಕೊಂಡು ಬಂದಿದ್ದರೆ ಮತ್ತು ಆ ತಳಿಗಳು ಹೆಚ್ಚು ಪ್ರಚಲಿತದಲ್ಲಿದ್ದರೆ ಅಂತಹ ತಳಿಗಳನ್ನು ಆಯಾ ರೈತರ ಹೆಸರಿನಲ್ಲಿ ನೋಂದಣಿಯನ್ನು ಮಾಡಿಸಲಾಗುವದು. ಕೆಲವೊಂದು ತಳಿಗಳು ಸಾಮೂಹಿಕವಾಗಿ ರೈತರ ಗುಂಪಿನಲ್ಲಿ ಅಥವಾ ಒಂದು ಸಂಘ ಸಂಸ್ಥೆಗಳ ಮೂಲಕ ಸಂರಕ್ಷಿಸಲ್ಪಟ್ಟಿದ್ದರೆ, ಅಂತಹ ತಳಿಗಳನ್ನು ರೈತರ ಗುಂಪು ಹಾಗೂ ಸಂಘ ಸಂಸ್ಥೆಗಳ ಹೆಸರಿನಲ್ಲಿ ನೋಂದಣಿಯನ್ನು ಮಾಡಿಸಲಾಗುವದು. ನೋಂದಣಿ ಮಾಡಿಸಲು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅರ್ಜಿಗಳು ಲಭ್ಯವಿದ್ದು, ಜಿಲ್ಲೆಯ ರೈತರು ಅರ್ಜಿಗಳನ್ನು ಪಡೆದು ನೋಂದಣಿ ಮಾಡಿಕೊಳ್ಳಲು ಕೃಷಿ ವಿಜ್ಞಾನ ಕೇಂದ್ರ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ: 08274-247274 ಸಂಪರ್ಕಿಸಬಹುದಾಗಿದೆ.