ಶನಿವಾರಸಂತೆ, ಫೆ. 8: ಶನಿವಾರಸಂತೆ ಗ್ರಾಮ ಪಂಚಾಯಿತಿ ಮಾಸಿಕಸಭೆ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಹೆಚ್. ಮಹಮದ್ ಗೌಸ್ ಅಧ್ಯಕ್ಷತೆಯಲ್ಲಿ ನಡೆಯಿತು.
ಪಂಚಾಯಿತಿ ಸದಸ್ಯ ಸರ್ದಾರ್ ಅಹ್ಮದ್ ಮಾತನಾಡಿ, ಶನಿವಾರಸಂತೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಮಸ್ಯೆ, ಅವ್ಯವಸ್ಥೆ ಹಾಗೂ ವೈದ್ಯರ ಕೊರತೆ ಬಗ್ಗೆ ಪ್ರಸ್ತಾಪಿಸಿದರು. ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿಗಳನ್ನು ಕಳುಹಿಸಿದ್ದರೂ ಪಂಚಾಯಿತಿಯ ನಿರ್ಣಯಗಳಿಗೆ ಯಾವದೇ ಬೆಲೆ ಸಿಗುತ್ತಿಲ್ಲ. ಸಾರ್ವಜನಿಕರು ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಪರದಾಡುವ ಸ್ಥಿತಿ ಇದೆ. ಈಗಿರುವ ಓರ್ವ ವೈದ್ಯರು ಸರಿಯಾಗಿ ಆಸ್ಪತ್ರೆಗೆ ಬರುತ್ತಿಲ್ಲ. ಈ ಬಗ್ಗೆ ಪಂಚಾಯಿತಿಯ ಸದಸ್ಯರುಗಳು ಸಾರ್ವಜನಿಕರೊಂದಿಗೆ ಸೇರಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು.
ಸಾರ್ವಜನಿಕರ ಆಸ್ತಿ ಕಾಪಾಡಲು ಮುಖ್ಯವಾಗಿ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ಸಮಸ್ಯೆಗಳ ಬಗ್ಗೆ ಅರಿವಿರಬೇಕು. ಆಗಾಗಿ ಪಂಚಾಯಿತಿಗೆ ಖಾಯಂ ಪಿ.ಡಿ.ಓ. ಅವರನ್ನು ನೇಮಿಸಬೇಕು ಎಂದು ಆಗ್ರಹಿಸಲಾಯಿತು. ಸಾರ್ವಜನಿಕ ಸಂತೆ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಬೇಕು. ಪಟ್ಟಣದಲ್ಲಿ ಸಂಚಾರ ದಟ್ಟಣೆ ಬಗ್ಗೆ ಈಗಾಗಲೇ ಸಾರ್ವಜನಿಕರಿಂದ ಏಕಮುಖ ಸಂಚಾರ ಅಗತ್ಯವಿರುವ ಬಗ್ಗೆ ಅರ್ಜಿಗಳು ಬಂದಿರುವದರಿಂದ ಏಕಮುಖ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಅಧ್ಯಕ್ಷರು ಹೇಳಿದರು.
ಗುಂಡೂರಾವ್ ಬಡಾವಣೆಯ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲಾಗಿ ಪೈಪ್ಲೈನ್ ಅಳವಡಿಸಲು ಹೊಸದಾಗಿ ಪೈಪ್ಗಳನ್ನು ಅಳವಡಿಸಲು ತೀರ್ಮಾನಿಸಲಾಯಿತು. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ರಸ್ತೆಯ ಪಕ್ಕದ ಅಂಗಡಿ ಮಳಿಗೆಗಳ ಪಕ್ಕ ಕಾಂಕ್ರೀಟಿಕರಣ ಮಾಡುವಂತೆ ತೀರ್ಮಾನಿಸಲಾಯಿತು. ಗುಂಡೂರಾವ್ ಬಡಾವಣೆ ಗಣಪತಿ ದೇವಸ್ಥಾನದ ಸಮೀಪ ಚರಂಡಿ ನಿರ್ಮಿಸುವಂತೆ ಹಾಗೂ ಸೋಲಾರ್ ದೀಪ ಅಳವಡಿಸುವಂತೆ ಸೂಚಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಹರೀಶ್, ಸದಸ್ಯರುಗಳಾದ ಎಸ್.ಎ. ಆದಿತ್ಯಗೌಡ, ಎಸ್.ಎನ್. ಪಾಂಡು, ಸರ್ದಾರ್, ಹೆಚ್.ಆರ್. ಹರೀಶ್, ರಜನಿರಾಜು, ಸೌಭಾಗ್ಯಲಕ್ಷ್ಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್, ಲೆಕ್ಕ ಸಹಾಯಕ ವಸಂತ, ಕಂಪ್ಯೂಟರ್ ನಿರ್ವಾಹಕಿ ಫೌಜಿಯಾ ಉಪಸ್ಥಿತರಿದ್ದರು. ಪಂಚಾಯಿತಿ ಕಾರ್ಯದರ್ಶಿ ತಮ್ಮಯ್ಯಚಾರ್ ಸ್ವಾಗತಿಸಿ, ವಂದಿಸಿದರು.