ಹೆಬ್ಬಾಲೆ, ಫೆ. 7: ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡ್ಲುಕೊಪ್ಪಲು ಗ್ರಾಮದ ಪ್ರಗತಿಪರ ರೈತ ಟಿ.ಜೆ. ಶೇಷಪ್ಪ ಅವರ ಬಾಳೆ ತೋಟದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತೋಟಗಾರಿಕಾ ಇಲಾಖೆ ವತಿಯಿಂದ ಬಾಳೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಸಲಾಯಿತು.

ಕ್ಷೇತ್ರೋತ್ಸವದಲ್ಲಿ ಗೋಣಿಕೊಪ್ಪ ಜೆಕೆವಿಕೆ ಕಾಲೇಜಿನ ಕೃಷಿ ವಿಜ್ಞಾನಿ ಡಾ. ವಿರೇಂದ್ರ ಬಾಳೆ ಬೆಳೆ ಕುರಿತು ರೈತರಿಗೆ ಮಾಹಿತಿ ನೀಡಿದರು. ರೈತರು ಲಾಭದಾಯಕ ತೋಟಗಾರಿಕಾ ಬೆಳೆಯಾಗಿರುವ ಬಾಳೆ ಬೆಳೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದರು.

ಜಿಲ್ಲೆಯ ಗಡಿ ಭಾಗವಾದ ಶಿರಂಗಾಲ, ತೊರೆನೂರು ಹಾಗೂ ಹೆಬ್ಬಾಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಾಳೆ ಬೆಳೆಗೆ ಸೂಕ್ತವಾದ ವಾತಾವರಣ ಇದೆ. ಬೆಳೆಯನ್ನು ಚೆನ್ನಾಗಿ ನೀರು ಬಸಿದು ಹೋಗುವಂತಹ ಕೆಂಪು ಗೋಡು ಮಣ್ಣಿನಿಂದ ಹಿಡಿದು ಕಪ್ಪು ಮಣ್ಣಿನಲ್ಲಿಯು ಬೆಳೆಯಬಹುದು. ತೇವಾಂಶವನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳುವ ಹೆಚ್ಚು ಸಾವಯವಯುಕ್ತ ಮಣ್ಣು ಈ ಬೆಳೆಗೆ ಯೋಗ್ಯವಾಗಿದೆ ಎಂದು ತಿಳಿಸಿದರು.

ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್ ಮಾತನಾಡಿ, ರೈತರು ತೋಟಗಾರಿಕಾ ಬೆಳೆಗಳನ್ನು ಬೆಳೆಯುವದರಿಂದ ಹೆಚ್ಚಿನ ಆದಾಯ ಪಡೆಯಬಹುದು. ಜೊತೆಗೆ ನಾವುಗಳು ಉತ್ಪಾದಿಸುವ ಹಣ್ಣು ಹಾಗೂ ತರಕಾರಿಗಳನ್ನು ನಿತ್ಯ ಜೀವನದಲ್ಲಿ ಬಳಕೆ ಮಾಡುವದರಿಂದ ಸಮತೋಲನ ಆಹಾರ ಭದ್ರತೆ ಸುಧಾರಿಸಲು ಅನುಕೂಲವಾಗುತ್ತದೆ ಎಂದರು.

ತೋಟಗಾರಿಕಾ ಇಲಾಖೆ ವಿಷಯ ತಜ್ಞ ಡಾ. ಪ್ರವೀಣ್ ಮಾತನಾಡಿ, ರೈತರು ಪಾಲಿಹೌಸ್ (ಹಸಿರುಮನೆ)ಯಲ್ಲಿ ತರಕಾರಿ ಹಾಗೂ ಹೂಗಳನ್ನು ಬೆಳೆಯುವ ಮೂಲಕ ಅಧಿಕ ಲಾಭ ಪಡೆದು ತಮ್ಮ ಜೀವನಮಟ್ಟ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಎಸ್. ರಮೇಶ್ ಅಧ್ಯಕ್ಷತೆ ವಹಿಸಿದ್ದರು.

ಗ್ರಾ.ಪಂ. ಸದಸ್ಯ ವೀರಭದ್ರಪ್ಪ, ಪ್ರಗತಿಪರ ರೈತರಾದ ಮರೂರು ಶಿವರುದ್ರಪ್ಪ, ಮಣಜೂರು ಗುರುಲಿಂಗಪ್ಪ, ನಿವೃತ್ತ ಮುಖ್ಯ ಶಿಕ್ಷಕ ರಾಜಶೇಖರ್, ಸೋಮವಾರಪೇಟೆ ತಾಲೂಕು ಹಿರಿಯ ತೋಟಗಾರಿಕ ನಿರ್ದೇಶಕ ಮುತ್ತಪ್ಪ, ತೋಟಗಾರಿಕ ಸಹಾಯಕ ಅಧಿಕಾರಿ ಕಾವ್ಯ, ತಾಳೆ ಬೆಳೆ ಕ್ಷೇತ್ರ ಸಹಾಯಕ ಎಂ.ಕೆ. ಶಶಿಧರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಡಿ. ಹರೀಶ್ ಹಾಗೂ ಗ್ರಾಮದ ರೈತರು ಇದ್ದರು.