ಸೋಮವಾರಪೇಟೆ, ಫೆ. 6: ಮಾಧ್ಯಮಗಳ ನಿರಂತರ ವರದಿ ಮತ್ತು ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಆಗ್ರಹದ ನಂತರ ಇಲ್ಲಿನ ಪೊಲೀಸ್ ಠಾಣೆಗೆ ನೂತನ ಜೀಪ್ ಆಗಮಿಸಿದೆ.

ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ಅವರು ಸೋಮವಾರಪೇಟೆ ಠಾಣೆಗೆ ನೂತನ ಜೀಪ್ ಒದಗಿಸಿದ್ದು, ಠಾಣಾಧಿ ಕಾರಿಗಳೂ ಸೇರಿದಂತೆ ಸಿಬ್ಬಂದಿ ವರ್ಗ ಕೊಂಚ ನಿರಾಳವಾಗಿದೆ. ಈ ಹಿಂದೆ ಇದ್ದ ಜೀಪ್ 3 ಲಕ್ಷಕ್ಕೂ ಹೆಚ್ಚು ಕಿ.ಮೀ. ಸಂಚರಿಸಿದ್ದು, ಪೊಲೀಸ್ ಇಲಾಖೆಗೆ ‘ಅನ್‍ಫಿಟ್’ ಎಂಬಂತಹ ಸ್ಥಿತಿಗೆ ತಲಪಿತ್ತು.

ಈ ಬಗ್ಗೆ ಪ್ರಥಮವಾಗಿ ‘ಶಕ್ತಿ’ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನ ಸೆಳೆದ ಸಂದರ್ಭ, ಸೋಮವಾರಪೇಟೆಗೆ ನೂತನ ಜೀಪ್ ಒದಗಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದ್ದರು. ನಂತರ ಇಲ್ಲಿನ ಕೊಡವ ಸಮಾಜದಲ್ಲಿ ನಡೆದ ಪೊಲೀಸ್ ಇಲಾಖಾ ಜನಸಂಪರ್ಕ ಸಭೆಯಲ್ಲೂ ಹಲವಷ್ಟು ಸಾರ್ವಜನಿಕರು ಜೀಪ್‍ನ ಬಗ್ಗೆ ಗಮನ ಸೆಳೆದಿದ್ದರು.

ಸಭೆಯಲ್ಲಿ ನೀಡಿದ ಭರವಸೆಯಂತೆ ಪೊಲೀಸ್ ವರಿಷ್ಠಾಧಿಕಾರಿಗಳು ಠಾಣೆಗೆ ನೂತನ ಜೀಪ್ ಒದಗಿಸಿದ್ದು, ಪೊಲೀಸ್ ಸಿಬ್ಬಂದಿಗಳೊಂದಿಗೆ ಸಾರ್ವಜನಿಕರ ಪ್ರಶಂಸೆಗೂ ಪಾತ್ರರಾಗಿದ್ದಾರೆ.