ಮಡಿಕೇರಿ, ಫೆ. 6: ಇಲ್ಲಿನ ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿ ಕೋತ್ಸವವು ನಿನ್ನೆ ಹಾಗೂ ಇಂದು ನೆರವೇರಿತು. ಪೊಳಲಿಯ ಸುಬ್ರಮಣ್ಯ ತಂತ್ರಿಗಳ ನೇತೃತ್ವದಲ್ಲಿ ದೇವತಾ ಕೈಂಕರ್ಯಗಳು ಜರುಗುವದ ರೊಂದಿಗೆ, ನಿನ್ನೆ ಸಂಜೆ ಪ್ರಸಾದ ಸಿದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಿಷ್ಣು ಪೂಜೆ, ದಿಶಾ ಬಲಿ ಕೈಂಕರ್ಯಗಳು ವಿಧಿ ವಿಧಾನಗಳೊಂದಿಗೆ ನೆರವೇರಿತು.

ಇಂದು ಬೆಳಿಗ್ಗೆ ಸನ್ನಿಧಿಯಲ್ಲಿ ಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ, ನಾಗದೇವರಿಗೆ ಪಂಚಾಮೃತಾಭಿಷೇಕ, ನಾಗಪೂಜೆ, ಶ್ರೀ ದಂಡಿನ ಮಾರಿಯಮ್ಮ ದೇವಿಗೆ ಅಲಂಕಾರ ಸೇವೆಯೊಂದಿಗೆ ಮಹಾಪೂಜೆ ಜರುಗಿತು. ಆ ಬಳಿಕ ಮಧ್ಯಾಹ್ನ ಪ್ರಸಾದದೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಸದ್ಭಕ್ತರು ಪಾಲ್ಗೊಂಡಿದ್ದರು. ದೇವಾಲಯ ಸಮಿತಿಯ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪೂಜಾ ಕೈಂಕರ್ಯದೊಂದಿಗೆ ಅನ್ನ ಸಂತರ್ಪಣೆ ವೇಳೆ ಸಹಯೋಗ ನೀಡಿದರು.