ಮಡಿಕೇರಿ, ಫೆ. 6: ಇಪ್ಪತ್ತನಾಲ್ಕನೇ ವಯಸ್ಸಿನಲ್ಲಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದಾತನನ್ನು 32 ವರ್ಷದ ಬಳಿಕ ಅಂದರೆ ಆತನ 56ನೇ ವರ್ಷದಲ್ಲಿ ಬಂಧಿಸಿ ಸೆರೆಮನೆಗೆ ಕಳುಹಿಸಿದ ಕಾರ್ಯವನ್ನು ಪೊಲೀಸರು ಮಾಡಿದ್ದಾರೆ.
ಹಾಕತ್ತೂರು ಗ್ರಾಮ ನಿವಾಸಿ, ಕುಂಞಲಿ ಎಂಬವರ ಪುತ್ರ ಸಿ.ಕೆ. ಹಂಸ (56) ಎಂಬಾತ 1991-92ನೇ ಸಾಲಿನಲ್ಲಿ ನಕಲಿ ಚಿನ್ನಗಳನ್ನು ಅಡವಿಟ್ಟು ಬ್ಯಾಂಕ್‍ಗೆ ವಂಚಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತನ ಬಗ್ಗೆ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದೀಗ ಆತ ಕೇರಳದ ಕಾಞಂಗಾಡ್‍ನ ಪಡೆನಕ್ಕಾಡ್ ಗೇಟ್ ಬಳಿ ಇರುವ ಸುಳಿವು ದೊರೆತ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ ಮೇರೆಗೆ ನ್ಯಾಯಾಧೀಶರು 15 ದಿನಗಳ ನ್ಯಾಯಾಂಗ ವಶಕೊಪ್ಪಿಸಿದ್ದಾರೆ. ಎಸ್‍ಪಿ ಸುಮನ್ ಡಿ.ಪಿ. ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪಾಧೀಕ್ಷಕರು, ಗ್ರಾಮಾಂತರ ಠಾಣಾಧಿಕಾರಿ ಚೇತನ್, ಸಹಾಯಕ ಠಾಣಾಧಿಕಾರಿಗಳಾದ ರವಿ, ಇಬ್ರಾಹಿಂ, ಸಿಬ್ಬಂದಿ ಹನೀಫ್ ಪಾಲ್ಗೊಂಡಿದ್ದರು.