ಶನಿವಾರಸಂತೆ, ಫೆ. 5: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಮೂವರು ಯುವಕರು ಹಲ್ಲೆ ನಡೆಸಿ, ನಿಂದಿಸಿ, ಸಮವಸ್ತ್ರ ಹರಿದು ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಗುಡುಗಳಲೆ ಜಯದೇವ ಜಾನುವಾರು ಜಾತ್ರಾ ಮೈದಾನದಲ್ಲಿ ಸೋಮವಾರ ನಡೆದಿದೆ.

ಕೂಗೇಕೋಡಿ ಗ್ರಾಮದ ಆದರ್ಶ, ಶಾಂತವೇರಿ ಗ್ರಾಮದ ಅರುಣ್ ಹಾಗೂ ಧನಂಜಯ್ ಬಂದಿತ ಆರೋಪಿಗಳು. ಪೊಲೀಸ್ ಸಿಬ್ಬಂದಿ ಬಿ. ಚೆನ್ನಕೇಶವ ಸಹೊದ್ಯೋಗಿ ಎಚ್.ಜಿ. ಹರೀಶ್ ಅವರೊಂದಿಗೆ ಜಾತ್ರಾ ಮೈದಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.

ಕಲ್ಲಂಗಡಿ ಹಣ್ಣಿನ ವ್ಯಾಪಾರಿ ಶಾಹೀದ್ ದೂರವಾಣಿ ಕರೆ ಮಾಡಿ ಜಾತ್ರಾ ಮೈದಾನದ ಮಸೀದಿ ಮುಂಭಾಗದ ಜಂಕ್ಷನ್‍ನಲ್ಲಿ ಗಲಾಟೆಯಾಗುತ್ತಿರುವ ಬಗ್ಗೆ ತಿಳಿಸಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಚೆನ್ನಕೇಶವ ಜಗಳ ಬಿಡಿಸಲು ಯತ್ನಿಸುತ್ತಿರುವಾಗ ಅವರ ಮೇಲೆ ಹಲ್ಲೆ ನಡೆದಿದೆ.

ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಚೆನ್ನಕೇಶವ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಯಿತು. ನ್ಯಾಯಾಧೀಶರು ಆರೋಪಿಗಳನ್ನು 15 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ.

ಈ ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ನಂಜುಂಡೇಗೌಡ ಎಎಸ್‍ಐ ನಂಜುಂಡೇಗೌಡ, ಸಿಬ್ಬಂದಿ ಪ್ರದೀಪ್ ಕುಮಾರ್, ಶಿವಣ್ಣ, ಹರೀಶ್, ಸ್ವಾಮಿ, ರಘು ಪಾಲ್ಗೊಂಡಿದ್ದರು.