ಸೋಮವಾರಪೇಟೆ, ಫೆ. 4: ಕಳೆದ ಮಳೆಗಾಲದಲ್ಲಿ ಸುರಿದ ಧಾರಾಕಾರ ಮಳೆಯಿಂದ ಪಟ್ಟಣದಲ್ಲಿ ವಾಸವಾಗಿರುವ ಬಡ ಕುಟುಂಬವೊಂದರ ಮನೆ ಕುಸಿದಿದ್ದು, ಲಯನ್ಸ್ ಸಂಸ್ಥೆಯ ವತಿಯಿಂದ ಮನೆಯನ್ನು ನಿರ್ಮಿಸಿ ಕೊಡಲಾಗುವದು ಎಂದು ಸೋಮವಾರಪೇಟೆ ಲಯನ್ಸ್ ಅಧ್ಯಕ್ಷ ಎಸ್.ಎನ್. ಯೋಗೇಶ್ ಹೇಳಿದರು.

ಪತ್ರಕರ್ತರಾಗಿದ್ದ ದಿ. ಪಿ.ಆರ್. ಮಂಜುನಾಥ್ ಕುಟುಂಬ ಸಂಕಷ್ಟದಲ್ಲಿತ್ತು. ಅದೇ ಸಂದರ್ಭ ವಾಸದ ಮನೆಯು ಕುಸಿದು, ಅನಾರೋಗ್ಯ ಪೀಡಿತರಾಗಿದ್ದ ಅವರ ಪತ್ನಿ ಹಾಗೂ ಮಗನಿಗೆ ವಾಸಕ್ಕೆ ಮನೆಯೂ ಇರಲಿಲ್ಲ. ಇದೇ ಸಮಯದಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲ ದೇವದಾಸ್ ಭಂಡಾರಿ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭ, ಸಂಕಷ್ಟದಲ್ಲಿರುವ ಕುಟುಂಬದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗಿತ್ತು.

ಈಗಾಗಲೇ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯಿಂದ ರೂ. 2.33 ಲಕ್ಷ ಬಿಡುಗಡೆಯಾಗಿದ್ದು, ಮನೆ ನಿರ್ಮಾಣದ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮನೆ ನಿರ್ಮಾಣಕ್ಕೆ ರೂ. 8 ಲಕ್ಷಗಳ ಅಂದಾಜುಪಟ್ಟಿ ತಯಾರಿಸಲಾಗಿದೆ. ಹೆಚ್ಚುವರಿ ಹಣವನ್ನು ದಾನಿಗಳಿಂದ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಇಂತಹ ಒಳ್ಳೆಯ ಕಾರ್ಯಕ್ಕೆ ದಾನಿಗಳು ಧನ ಸಹಾಯ ಮಾಡಬಹುದು.

ಇಟ್ಟಿಗೆ, ಸಿಮೆಂಟು, ಮರಳು ಸೇರಿದಂತೆ ಸಾಮಗ್ರಿಗಳ ರೂಪದಲ್ಲಿಯೂ ನೀಡಬಹುದು ಎಂದು ಯೋಜನೆಯ ಮುಖ್ಯಸ್ಥ ಎ.ಆರ್. ಮುತ್ತಣ್ಣ ಹೇಳಿದರು.