ಸಿದ್ದಾಪುರ, ಫೆ. 3: ಪ್ರತಿ ಮನೆಯಲ್ಲೂ ಹಸುಗಳನ್ನು ಸಾಕಿಕೊಂಡು ಹೈನುಗಾರಿಕೆಗೆ ಉತ್ತೇಜನ ನೀಡುವ ಮೂಲಕ ಸಾವಯವ ಕೃಷಿಯಿಂದ ಅರ್ಥಿಕ ಅಭಿವೃದ್ಧಿ ಕಂಡುಕೊಳ್ಳಬೇಕೆಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಕುಟುಂಬ ಇಲಾಖಾ ವತಿಯಿಂದ ಅಭ್ಯತ್‍ಮಂಗಲದಲ್ಲಿ ಪಶು ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ರಂಜನ್ ಹಿಂದಿನ ಕಾಲದಲ್ಲಿ ಪ್ರತೀ ಮನೆಯಲ್ಲೂ ಜಾನುವಾರುಗಳನ್ನು ಸಾಕುತ್ತಿದ್ದರು. ಹೈನುಗಾರಿಕೆಯಿಂದ ಶಾಲಾ ಮಕ್ಕಳ ವಿದ್ಯಾಭ್ಯಾಸ, ಸಮವಸ್ತ್ರಗಳನ್ನು ಪೋಷಕರು ಸರಿದೂಗಿಸುತ್ತಿದ್ದರು. ಆದರೆ ಇತ್ತೀಚಿಗಿನ ದಿನಗಳಲ್ಲಿ ಕೊಡಗಿನಲ್ಲಿ ಹೈನುಗಾರಿಕೆ ಕುಂಠಿತಗೊಳ್ಳುತ್ತಿರುವದು. ಸಮಾಜದ ಹಿತದೃಷ್ಟಿಯಿಂದ ಆಶಾದಾಯಕ ಬೆಳವಣಿಗೆಯಲ್ಲ ಎಂದು ವಿಷಾದಿಸಿದರು.

ಜಾನುವಾರುಗಳನ್ನು ಸಾಕುವದರಿಂದ ಸಗಣಿ ಮೂಲಕ ಸಾವಯವ ಕೃಷಿ, ತರಕಾರಿ ಬೆಳೆಯಲು ಸಹಕಾರಿಯಾಗುತ್ತದೆ. ಹಾಗೆಯೇ ಕುಟುಂಬದ ಅರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗ ಪ್ರತಿ ಗ್ರಾಮದಲ್ಲೂ ಹೈನುಗಾರಿಕೆಗೆ ಉತ್ತೇಜನ ನೀಡಲು ಪಶುಚಿಕಿತ್ಸಾ ಕೇಂದ್ರ ತೆರೆಯಲು ಅನುದಾನ ಒದಗಿಸಿದರು. ತಾನು ಮಂತ್ರಿಯಾದಾಗ ಇಲ್ಲಿನ ಪಶುಚಿಕಿತ್ಸಾ ಕೇಂದ್ರದ ಭೂಮಿ ಪೂಜೆ ನೆರವೇರಿಸಿದ್ದೆ; 17 ಲಕ್ಷ ರೂ ವೆಚ್ಚದಲ್ಲಿ ಪಶುಪಾಲನಾ ಕೇಂದ್ರ ನಿರ್ಮಿಸಲಾಗಿದೆ ಎಂದೂ ಹೇಳಿದರು.

ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ಜಿ.ಪಂ.ಸದಸ್ಯೆ ಸುನೀತಾ ಮಾತನಾಡಿದರು.

ವೇದಿಕೆಯಲ್ಲಿ ವಾಲ್ನೂರು ತ್ಯಾಗತ್ತೂರು ತಾ.ಪಂ.ಸದಸ್ಯ ಸುಹಾದ ಅಶ್ರಫ್, ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಎ.ಬಿ. ತಮ್ಮಯ್ಯ್ಳ, ಪಶುಸಂಗೋಪಾನ ಇಲಾಖೆಯ ಡಾ.ಸಂಜೀವ ಸಿಂಧೆ, ಗ್ರಾ.ಪಂ.ಅಧ್ಯಕ್ಷೆ ನಾಗರತ್ನ, ಆಭ್ಯತ್‍ಮಂಗಲ ಪಶುಪಾಲನಾ ಕೇಂದ್ರ ಪರಿವೀಕ್ಷಕ ಲಿಂಗರಾಜು, ಗ್ರಾ.ಪಂ. ಸದಸ್ಯರುಗಳಾದ ಅಂಚೆಮನೆ ಸುದಿ, ನಳಿನಿ, ಜಮೀಲಾ, ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು ಉಪಸ್ಥಿತರಿದ್ದರು.

ಡಾ.ಎ.ಬಿ.ತಮ್ಮಯ್ಯ ಸ್ವಾಗತಿಸಿ, ಡಾ.ಸಂಜೀವ ಸಿಂಧೆ ವಂದಿಸಿದರು.