ಗೋಣಿಕೊಪ್ಪ ವರದಿ, ಫೆ. 3: ಪೊನ್ನಂಪೇಟೆ ಜೆಸಿಐ ಗೋಲ್ಡನ್ (ಜೂನಿಯರ್ ಚೇಂಬರ್ ಇಂಟರ್‍ನ್ಯಾಷನಲ್) ಅಧ್ಯಕ್ಷರಾಗಿ ಕೊಣಿಯಂಡ ಕಾವ್ಯ ಸೋಮಯ್ಯ, ಕಾರ್ಯದರ್ಶಿಯಾಗಿ ಕೆ.ಜೆ. ನಾಣಯ್ಯ ಅವರು ಪದಗ್ರಹಣ ಸ್ವೀಕರಿಸಿದರು.

ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ಖಜಾಂಜಿಯಾಗಿ ಕೆ.ಕೆ. ಗಿರಿ, ನಿರ್ದೇಶಕರುಗಳಾಗಿ ಸುಜು ಕರುಂಬಯ್ಯ, ಸತೀಶ್, ರಘು ತಿಮ್ಮಯ್ಯ, ಕೆ.ಎಸ್. ಮೊಣ್ಣಪ್ಪ, ಮುದ್ದಪ್ಪ, ಜೆಸಿರೆಟ್ ಮುಖ್ಯಸ್ಥರಾಗಿ ಸುಜ್ಯೋತಿ ರಾಬಿನ್, ಜೂನಿಯರ್ ಜೆಸಿ ಮುಖ್ಯಸ್ಥರಾಗಿ ಧ್ಯಾನ್ ಪೆಮ್ಮಯ್ಯ, ಉಪಾಧ್ಯಕ್ಷರುಗಳಾಗಿ ದಿಲನ್ ಚೆಂಗಪ್ಪ, ಎಂ.ಬಿ. ಬೋಪಣ್ಣ, ಸಿ.ಪಿ. ಬೋಪಣ್ಣ ಪದಗ್ರಹಣ ಸ್ವೀಕರಿಸಿದರು. ವಲಯ ಅಧ್ಯಕ್ಷ ಜೆಫಿನ್ ಪದಗ್ರಹಣ ಬೋಧಿಸಿದರು.

ಮೈಸೂರು ಸೆಂಟ್ರಲ್ ಟ್ಯಾಕ್ಸ್, ಕಸ್ಟಮ್ಸ್ ನಿರ್ವಾಹಕ ಮುಕ್ಕಾಟಿರ ಬೋಪಣ್ಣ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಮಕ್ಕಳಲ್ಲಿ ಸೇವಾ ಮನೋಭಾವನೆ ಕ್ಷೀಣಿಸುತ್ತಿದ್ದು, ಪೋಷಕರು ಈ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಶಿಕ್ಷಣ ಸಂಸ್ಥೆಗಳಲ್ಲಿ ಸೇವಾ ಭಾವನೆ ಹೆಚ್ಚಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕಿದೆ ಎಂದರು. ಈ ಸಂದರ್ಭ ನಿರ್ಗಮಿತ ಅಧ್ಯಕ್ಷ ಅರಸು ನಂಜಪ್ಪ, ವಲಯ ಉಪಾಧ್ಯಕ್ಷ ಕೆ. ಪ್ರವೀಣ್, ನಿಕಟಪೂರ್ವ ಅಧ್ಯಕ್ಷ ಪೊನ್ನಿಮಾಡ ಪ್ರದೀಪ್, ಕಾರ್ಯದರ್ಶಿ ತಿಮ್ಮಯ್ಯ ಉಪಸ್ಥಿತರಿದ್ದರು.