ಮಡಿಕೇರಿ, ಫೆ. 3: ಮಡಿಕೇರಿಯ ನೆಹರು ಯುವ ಕೇಂದ್ರ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟ ಹಾಗೂ ಗಾಳಿಬೀಡುವಿನ ಯುವಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲಾ ಮಟ್ಟದ ಸಾಂಸ್ಕøತಿಕ ಮೇಳ ನಡೆಯಿತು.

ಗಾಳಿಬೀಡುವಿನ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಗ್ರಾ.ಪಂ ಉಪಾಧ್ಯಕ್ಷರಾದ ರಾಣಿ ಮುತ್ತಣ್ಣ, ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವಲ್ಲಿ ಯುವಕ ಸಂಘಗಳ ಪಾತ್ರ ದೊಡ್ಡದು ಎಂದರು.

ಗ್ರಾ.ಪಂ. ಸದಸ್ಯ ಸುಭಾಷ್ ಆಳ್ವ, ಗಾಳಿಬೀಡುವಿನಂತಹ ಕುಗ್ರಾಮದಲ್ಲಿ ಇಂಥಹ ಕಾರ್ಯಕ್ರಮವನ್ನು ಆಯೋಜಿಸಿರುವದು ಶ್ಲಾಘನೀಯ. ಇನ್ನು ಮುಂದೆಯೂ ಯುವ ಸ್ಫೂರ್ತಿಯ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ವಹಿಸಿದ್ದರು.

ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ, ಸೋಮವಾರಪೇಟೆ ಅಧ್ಯಕ್ಷೆ ಚಂದ್ರಿಕಾ, ವಿರಾಜಪೇಟೆ ಅಧ್ಯಕ್ಷೆ ಶೀಲಾ ಬೋಪಣ್ಣ ಉಪಸ್ಥಿತರಿದ್ದರು.

ಯುವ ಒಕ್ಕೂಟದ ಉಪಾಧ್ಯಕ್ಷರಾದ ಇಂದುಮತಿ ಪ್ರಾರ್ಥಿಸಿದರೆ, ಗಾಳಿಬೀಡು ಯುವಕ ಸಂಘದ ಅಧ್ಯಕ್ಷ ಯು.ಎಸ್.ಗಿರೀಶ್ ಸ್ವಾಗತಿಸಿದರು. ಕೆ.ಕೆ.ಗಣೇಶ್ ನಿರೂಪಿಸಿದರೆ ಮಧುಮೋಹನ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.