ಮಡಿಕೇರಿ, ಫೆ. 4: ಮೇಘಾಲಯ, ಅಸ್ಸಾಂ, ತ್ರಿಪುರ ಮತ್ತು ಮಿಜೋರಾಂ ಗ್ರೇಟರ್ ಆಟೋನಮಿ ಮಸೂದೆಯೊಂದಿಗೆ, “ಕೊಡವ ಕ್ವೆಸ್ಟ್ ಫಾರ್ ಅಟೋನಮಿ”ಯನ್ನು ಕೂಡ ಸೇರಿಸಿ ಸಂವಿಧಾನ ತಿದ್ದುಪಡಿ ತರಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಸಂವಿಧಾನ ಪುನರ್ಘಟನಾ ಆಯೋಗವು ಕೊಡವ ಸ್ವಾಯತ್ತ ಪ್ರದೇಶ ರಚಿಸುವಂತೆ ಶಿಫಾರಸ್ಸಿನ ವರದಿ ನೀಡಿದ್ದು, ಕೇಂದ್ರ-ರಾಜ್ಯಗಳ ಅಧ್ಯಾಯದಲ್ಲಿ ದಾಖಲಿಸಿರುವ ಅಂಶಗಳನ್ನು ಇದೀಗ ಈಶಾನ್ಯ ರಾಜ್ಯಗಳ 10 ಸ್ವಾಯತ್ತ ಪ್ರದೇಶಗಳಿಗೆ ಗ್ರೇಟರ್ ಅಟೋನಮಿ ನೀಡಲು ಮಂಡಿಸ ಲಾಗುತ್ತಿರುವ ಸಂವಿಧಾನ ತಿದ್ದುಪಡಿ ಮಸೂದೆಯಲ್ಲಿ ‘ಕೊಡವ ಕ್ವೆಸ್ಟ್ ಫರ್ಅಟೋನಮಿ’ ಸೇರಿಸಬೇಕೆಂದು ಒತ್ತಾಯಿಸಿದರು.
ಭಾರತದ ಈಶಾನ್ಯ ರಾಜ್ಯಗಳಲ್ಲಿನ ವಿವಿಧ ಜನಾಂಗೀಯ ಕುಲಗಳ ಕುರುಹುಗಳ ಕಾಯ್ದೆಬದ್ಧ ಸಂರಕ್ಷಣೆಗಾಗಿ ಸಂವಿಧಾನದ 6ನೇ ಶೆಡ್ಯೂಲ್ನ ಅಡಿಯಲ್ಲಿ 10 ಸ್ವಾಯತ್ತ ಪ್ರದೇಶಗಳನ್ನು ಮತ್ತಷ್ಟು ಆರ್ಥಿಕ, ರಾಜಕೀಯ, ಮತ್ತು ಆಡಳಿತಾತ್ಮಕವಾಗಿ ಸಬಲೀಕರಣಗೊಳಿಸುವ ಮೂಲಕ ಹೆಚ್ಚುವರಿ ಸ್ವಾಯತ್ತತೆ ನೀಡುವ ಸಲುವಾಗಿ ತಿದ್ದುಪಡಿ ಮಸೂದೆಯನ್ನು ಇದೇ ಬಜೆಟ್ ಅಧಿವೇಶ ನದಲ್ಲಿ ಮಂಡಿಸಲು ಮುಂದಾಗಿರುವ ಕೇಂದ್ರದ ಎನ್.ಡಿ.ಎ. ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದ್ದರೂ, ಕೊಡವ ಸ್ವಾಯತ್ತತೆಯ ವಿಚಾರವನ್ನು ಈ ಮಸೂದೆ ವ್ಯಾಪ್ತಿಯಲ್ಲಿ ತಾರದಿರುವದಕ್ಕೆ ತಾರತಮ್ಯ ಎಸಗಿದಂತಾಗುತ್ತದೆ ಎಂದು ನಾಚಪ್ಪ ಬೇಸರ ವ್ಯಕ್ತಪಡಿಸಿದರು.
ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಗೆ ಸೇರಿಸುವದರೊಂದಿಗೆ, ಕೊಡವ ಸ್ವಾಯತ್ತ ಪ್ರದೇಶಕ್ಕಾಗಿ ಸಿ.ಎನ್.ಸಿ. ಮಂಡಿಸಿರುವ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿದರು.