ಮಡಿಕೇರಿ, ಫೆ. 3: ಕೊಡಗು ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆಯನ್ನು ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ನೀಡುವ ಕ್ರಮವನ್ನು ಮುಂದಿನ 15 ದಿನಗಳ ಒಳಗಾಗಿ ಸ್ಥಗಿತಗೊಳಿಸದಿದ್ದಲ್ಲ್ಲಿ ರಾಜ್ಯ ಗುತ್ತಿಗೆದಾರರ ಸಹಕಾರದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವದಾಗಿ ರಾಜ್ಯ ಗುತ್ತಿಗೆದಾರರ ಸಂಘದ ಸಂಘಟನಾ ಕಾರ್ಯದರ್ಶಿ ರವಿ ಚಂಗಪ್ಪ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಉಂಟಾಗುವ ಹಾನಿಗೆ ಸಂಬಂಧಿಸಿದ ಕಾಮಗಾರಿ ಗಳನ್ನು ಮಾತ್ರ ಸ್ಥಳೀಯ ಗುತ್ತಿಗೆದಾರರಿಂದ ಮಾಡಿಸಲಾಗುತ್ತಿದ್ದು, ಬೇಸಿಗೆ ಯಲ್ಲಿ ಕೈಗೊಳ್ಳಬಹುದಾದ ದೊಡ್ಡ ಮಟ್ಟದ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಹೊರಗಿನ ಗುತ್ತಿಗೆದಾರರಿಗೆ ಕೊಡಿಸುತ್ತಿದ್ದಾರೆ. ಇದ ರಿಂದಾಗಿ ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು. ಕೊಡಗಿನಲ್ಲಿ ಆರು ತಿಂಗಳು ಮಳೆ ಇರುವದರಿಂದ ಉತ್ತಮವಾದ ಕೆಲಸ ಮಾಡಲು ಬೇಸಿಗೆ ಮೂರು ತಿಂಗಳು ಮಾತ್ರ ಅವಕಾಶವಿರುತ್ತದೆ. ಆದರೆ ಈ ಸಂದರ್ಭ ಗುಣಮಟ್ಟದಲ್ಲಿ ನಿರ್ವಹಿಸ ಬೇಕಾದ ಕಾಮಗಾರಿಗಳನ್ನು ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ಕೊಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೆಲವು ರಾಜಕಾರಣಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದು, ಮಳೆಗಾಲದಲ್ಲಿ ಕಷ್ಪಪಟ್ಟು ಕೆಲಸ ನಿರ್ವಹಿಸಿದ ಸ್ಥಳೀಯ ಗುತ್ತಿಗೆದಾರರಿಗೆ ಯಾವದೇ ಕೆಲಸವಿಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗಿನ ಗುತ್ತಿಗೆದಾರರಿಗೆ ನ್ಯಾಯ ಒದಗಿಸಬೇಕಾದ ಜಿಲ್ಲೆಯ ಶಾಸಕರನ್ನು ಉಸ್ತುವಾರಿ ಸಚಿವರು ತಮ್ಮ ಮಾತಿನಂತೆ ಇರಿಸಿಕೊಂಡಿದ್ದಾರೆ ಎಂದು ರವಿ ಚಂಗಪ್ಪ ಆರೋಪ ಮಾಡಿದರು.
ಕೊಡಗಿನ ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಜ.28ರಂದು ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲು ಉದ್ದೇಶಿಸ ಲಾಗಿತ್ತಾದರೂ, ಜಿಲ್ಲಾ ಸಂಘದ ಅಧ್ಯಕ್ಷರು ಜಾತ್ಯತೀತ ಜನತಾದಳ ದವರೇ ಆಗಿರುವದರಿಂದ ಅವರು ಸಚಿವರ ಮಾತನ್ನು ಮೀರಿ ಹೋಗದೆ ಇರುವದರಿಂದ ಪ್ರತಿಭಟನೆ ನಡೆದಿಲ್ಲವೆಂದರು. ಜಿಲ್ಲಾ ಸಂಘದಿಂದ ಗುತ್ತಿಗೆದಾರರಿಗೆ ನ್ಯಾಯ ದೊರಕುವ ಸಾಧ್ಯತೆ ಕಡಿಮೆ ಇದೆ. ಈ ಹಿನ್ನೆಲೆ ಮುಂದಿನ 15 ದಿನಗಳ ಒಳಗಾಗಿ ಉಸ್ತುವಾರಿ ಸಚಿವರು ತಮ್ಮ ನಿಲುವನ್ನು ಬದಲಾಯಿಸಿಕೊಳ್ಳದಿದ್ದಲ್ಲಿ ರಾಜ್ಯ ಸಂಘದ ಸಹಕಾರ ಪಡೆದು ನೊಂದ ಗುತ್ತಿಗೆದಾರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಿರುವದಾಗಿ ರವಿ ಚಂಗಪ್ಪ ಘೋಷಿಸಿದರು.
ಸೋಮವಾರಪೇಟೆಯ ಗುತ್ತಿಗೆದಾರ ಎ.ಕೆ. ಗಣೇಶ್ ಮಾತನಾಡಿ, ಜಿಲ್ಲೆಯ ಗುತ್ತಿಗೆದಾರರಿಗೆ ಅಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಜವಾಬ್ದಾರಿ ಜಿಲ್ಲೆಯ ಶಾಸಕರು ಹಾಗೂ ಲೋಕಸಭಾ ಸದಸ್ಯರ ಮೇಲಿದೆ. ಉಸ್ತುವಾರಿ ಸಚಿವರು ತಾತ್ಕಾಲಿಕವಾಗಿ ಬಂದು ಹೋಗುವವರಾಗಿದ್ದು, ನಮಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕಾದವರು ಜಿಲ್ಲೆಯ ಜನಪ್ರತಿನಿಧಿಗಳು ಎಂದರು. ಈ ಬಗ್ಗೆ ಶಾಸಕರ ಗಮನ ಸೆಳೆಯಲಾಗಿದೆ, ಆದರೆ ಇಲ್ಲಿಯವರೆಗೆ ಯಾವದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ಗುತ್ತಿಗೆದಾರ ಹೊಸಬೀಡು ಶಶಿ ಉಪಸ್ಥಿತರಿದ್ದರು.