ವೀರಾಜಪೇಟೆ, ಫೆ. 3: ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ವಾಸಿಸುವ ಬಡತನ ರೇಖೆ ಕೆಳಗಿರುವ ಕುಟುಂಬ ಗಳು ಹೊಗೆಯಿಂದ ಮುಕ್ತವಾಗಬೇಕು ಎಂಬದು ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಎಂದು ಕ್ಷೇತ್ರ ಶಾಸಕ ಕೆ.ಜಿ. ಬೊಪಯ್ಯ ಅಭಿಮತ ವ್ಯೆಕ್ತಪಡಿಸಿದರು.
ವೀರಾಜಪೇಟೆ ಕೆದಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಡತನ ರೇಖೆ ಕೆಳಗಿರುವ ಕುಟುಂಬಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ತರ್ಮೆಮೊಟ್ಟೆ ಗ್ರಾಮದ ಸಾರ್ವಜನಿಕ ಮೈದಾನದಲ್ಲಿ ಆಯೋಜಿಸಲಾದ ಅನಿಲ ಕಿಟ್ ವಿತರಣಾ ಸಮಾರಂಭ ದಲ್ಲಿ ಅವರು ಮಾತನಾಡಿದರು.
ಕೆದಮಳ್ಳೂರು ಪಂಚಾಯಿತಿ ವ್ಯಾಪ್ತಿಯಲ್ಲಿ 3ನೇ ಕಾರ್ಯಕ್ರಮವಾಗಿದ್ದು, ಸುಮಾರು 32 ಫಲಾನುಭವಿಗಳಿಗೆ ಗ್ಯಾಸ್ ಕಿಟ್ ವಿತರಣೆ ಮಾಡಲಾಗುತ್ತಿದೆ. ಫಲಾನು ಭವಿಗಳು ಇದರ ಸದುಪಯೋಗ ಪಡಿಸಿಕೊಂಡು ಅರೋಗ್ಯಕರ ಸಮಾಜವನ್ನು ಕಟ್ಟಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಮಾತನಾಡಿ, ಉಜ್ವಲ ಯೋಜನೆ ಗ್ರಾಮೀಣ ಭಾಗದ ಮಹಿಳೆಯರಿಗೆ ಸದುಪಯೋಗವಾಗಿದೆ ಎಂದರು. ವೇದಿಕೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷ ಗೌಡುದಾರೆ ಚೋಟು ಬಿದ್ದಪ್ಪ, ಗ್ರಾಮ ಪಂಚಾಯಿತಿಯ ಸದಸ್ಯರಾದ ಪರಮೇಶ್ವರ್, ಕಿರಣ್ ಮತ್ತು ಪಂಚಾಯಿತಿ ಉಪಾಧ್ಯಕ್ಷೆ ಅನಿತ ಮತ್ತು ಗ್ಯಾಸ್ ವಿತರಕ ಮಾದಪ್ಪ ಉಪಸ್ಥಿತರಿದ್ದರು.