ಕೂಡಿಗೆ, ಫೆ. 3: ಹೆಬ್ಬಾಲೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಅಧ್ಯಕ್ಷತೆಯಲ್ಲಿ ನಡೆಯಿತು. ಕಳೆದ 3 ಮಾಸಿಕ ಸಭೆಯಲ್ಲಿ ಚರ್ಚೆಯಾಗುತ್ತಿದ್ದ ಮಳಿಗೆಗಳ ಹರಾಜು ಪ್ರಕ್ರಿಯೆ ವಿಷಯ ಪ್ರಮುಖವಾಗಿತ್ತು.

ಹೆಬ್ಬಾಲೆ ಸರ್ಕಲ್‍ನ ಸಮೀಪದಲ್ಲಿರುವ 7 ಅಂಗಡಿ ಮಳಿಗೆಗಳ ಹರಾಜು ಅವಧಿ 6 ತಿಂಗಳ ಹಿಂದೆ ಮುಗಿದಿದ್ದು, ಈ ಸಾಲಿನಲ್ಲಿ ಹರಾಜು ಪ್ರಕ್ರಿಯೆಯನ್ನು ಮಾಡುವಂತೆ ಅಧಿಕಾರಿಗಳಿಂದ ಆದೇಶ ಬಂದಿರುವದರಿಂದ ಮಳಿಗೆಯ ಮಾಲೀಕರಿಗೆ ತಾ. 28 ಕೊನೆಯ ದಿನಾಂಕವಾಗಿರುತ್ತದೆ. ಇದರ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಯಿತು. ನಂತರ ಅಧಿಕಾರಿ ಆದೇಶವನ್ನು ಪಾಲಿಸುವ ಮೂಲಕ ಮುಂದಿನ 28 ರವರಗೆ ಗಡುವು ನೀಡಲು ಸಭೆ ಚುನಾವಣಾಯಲ್ಲಿ ತೀರ್ಮಾನಿಸಲಾಯಿತು. ನಂತರ ಸಭೆಯಲ್ಲಿ ನಮ್ಮ ಗ್ರಾಮ, ನಮ್ಮ ಯೋಜನೆಯ ಗ್ರಾಮ ಪುರಸ್ಕಾರದ ರೂ. 5 ಲಕ್ಷ ಹಣದಲ್ಲಿ ಬಹುಬೇಡಿಕೆಯಾಗಿದ್ದ ಸಮುದಾಯ ಸಾರ್ವಜನಿಕ ಶೌಚಾಲಯವನ್ನು ಹೆಬ್ಬಾಲೆಯಲ್ಲಿ ನಿರ್ಮಾಣ ಮಾಡಲು ಸರ್ವ ಸದಸ್ಯರು ಒಪ್ಪಿಗೆ ನೀಡಿದರು.

ನಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಎಲ್.ಇ.ಡಿ. ಬೀದಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸದಸ್ಯರು ಸಲಹೆಗಳನ್ನು ನೀಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಸರಕಾರದ ಸುತ್ತೋಲೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಕಾರ್ಯದರ್ಶಿ ಸೇರಿದಂತೆ ಸದಸ್ಯರು ಹಾಜರಿದ್ದರು.